

ಬೆಳಗಾವಿ, 10 ಜುಲೈ (ಹಿ.ಸ.):
ಆ್ಯಂಕರ್:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಬೈಠಕ್ ಬೆಳಗಾವಿಯಲ್ಲಿ ಶುಕ್ರವಾರ ಆರಂಭಗೊಂಡಿತು.
ಬೈಠಕ್‌ನಲ್ಲಿ ಆರ್‌ಎಸ್‌ಎಸ್‌ನ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹ ಸರಕಾರ್ಯವಾಹರು, ವಿವಿಧ ಕಾರ್ಯವಿಭಾಗಗಳ ಅಖಿಲ ಭಾರತೀಯ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರೀಯ ಹಾಗೂ ಸಹ ಕ್ಷೇತ್ರೀಯ ಪ್ರಚಾರಕರು, ದೇಶದ 46 ಪ್ರಾಂತಗಳ ಪ್ರಾಂತ ಮತ್ತು ಸಹ ಪ್ರಾಂತ ಪ್ರಚಾರಕರು ಸೇರಿದಂತೆ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ.
ಸಭೆಯಲ್ಲಿ 2026ರ ಮಾರ್ಚ್ ನಂತರ ವಿವಿಧ ಹಂತಗಳಲ್ಲಿ ನಡೆದ ಸಂಘದ ಪ್ರಶಿಕ್ಷಣ ವರ್ಗಗಳ ವರದಿ, ಶಾಖಾ ಮಟ್ಟದ ಕಾರ್ಯಯೋಜನೆಗಳ ಅನುಷ್ಠಾನ, ಸಂಘ ಶತಾಬ್ದಿ ಅಂಗವಾಗಿ ನಡೆದ ಶಾಖಾ ವಿಸ್ತರಣೆಯ ಪ್ರಗತಿ ಹಾಗೂ ಮುಂದಿನ ವಿಸ್ತರಣೆಯ ಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
ಇದರೊಂದಿಗೆ ಸಂಘ ಶತಾಬ್ದಿ ಪ್ರಯುಕ್ತ ನಡೆದ ಕಾರ್ಯಕ್ರಮಗಳ ಪರಿಶೀಲನೆ, ಉಳಿದ ಕಾರ್ಯಕ್ರಮಗಳ ರೂಪರೇಷೆ, 2026–27ನೇ ಸಾಲಿನ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಪ್ರವಾಸ ಯೋಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಸಂಘ ಶತಾಬ್ದಿ ಅಂಗವಾಗಿ ಆಯೋಜಿಸಿರುವ ಉಳಿದ ಕಾರ್ಯಕ್ರಮಗಳು 2026ರ ಅಕ್ಟೋಬರ್ 20ರಂದು ನಡೆಯಲಿರುವ ವಿಜಯದಶಮಿ ಉತ್ಸವದವರೆಗೆ ಮುಂದುವರಿಯಲಿವೆ ಎಂದು ಸಂಘದ ಮಾಧ್ಯಮ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.