
ನವದೆಹಲಿ, 10 ಜುಲೈ (ಹಿ.ಸ.):
ಆ್ಯಂಕರ್:
ಭಾರತದ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಗ್ರಂಥಾಲಯದ ಬಳಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಆಸ್ಟ್ರೇಲಿಯಾ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಮೆಲ್ಬೋರ್ನ್‌ನಲ್ಲಿ ನಡೆದ ಮೂರನೇ ಭಾರತ–ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥನಿ ಅಲ್ಬನೀಸ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಕಾರ, ಈ ಒಪ್ಪಂದದೊಂದಿಗೆ ಭಾರತದ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಗ್ರಂಥಾಲಯಕ್ಕೆ ಪ್ರವೇಶ ಪಡೆದ ದೇಶಗಳ ಪೇಟೆಂಟ್ ಕಚೇರಿಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಈ ಡಿಜಿಟಲ್ ಗ್ರಂಥಾಲಯದ ನೆರವಿನಿಂದ ಇದುವರೆಗೆ ಭಾರತದ ಸಾಂಪ್ರದಾಯಿಕ ಜ್ಞಾನವನ್ನು ಆಧರಿಸಿ ಸಲ್ಲಿಸಲಾಗಿದ್ದ 375ಕ್ಕೂ ಹೆಚ್ಚು ಪೇಟೆಂಟ್ ಅರ್ಜಿಗಳನ್ನು ರದ್ದುಗೊಳಿಸಲು, ತಿರಸ್ಕರಿಸಲು, ತಿದ್ದುಪಡಿ ಮಾಡಿಸಲು ಅಥವಾ ಹಿಂತೆಗೆದುಕೊಳ್ಳಲು ಸಾಧ್ಯವಾಗಿದೆ.
ಒಪ್ಪಂದದ ಅನ್ವಯ ಆಸ್ಟ್ರೇಲಿಯಾದ ಪೇಟೆಂಟ್ ಕಚೇರಿಯು ಇನ್ನು ಮುಂದೆ ಭಾರತದ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಗ್ರಂಥಾಲಯದ ಮಾಹಿತಿಯನ್ನು ಬಳಸಬಹುದು. ಹೊಸ ಔಷಧ, ಚಿಕಿತ್ಸೆ ಅಥವಾ ಸಾಂಪ್ರದಾಯಿಕ ಜ್ಞಾನಕ್ಕೆ ಸಂಬಂಧಿಸಿದ ಪೇಟೆಂಟ್ ಅರ್ಜಿ ಬಂದಾಗ, ಅದು ಈಗಾಗಲೇ ಭಾರತದ ಸಾಂಪ್ರದಾಯಿಕ ಜ್ಞಾನದ ಭಾಗವೇ ಎಂಬುದನ್ನು ಮೊದಲು ಪರಿಶೀಲಿಸಲಾಗುತ್ತದೆ. ಅಂತಹ ಮಾಹಿತಿ ಈಗಾಗಲೇ ದಾಖಲಾಗಿದ್ದರೆ ಹೊಸ ಪೇಟೆಂಟ್‌ಗೆ ಅನುಮತಿ ನೀಡಲಾಗುವುದಿಲ್ಲ.
ಭಾರತದ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಗ್ರಂಥಾಲಯವನ್ನು 2001ರಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಹಾಗೂ ಆಯುಷ್ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹಾಗೂ ಸೋವಾ ರಿಗ್ಪಾ ಸೇರಿದಂತೆ ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಜ್ಞಾನವನ್ನು ಸಂರಕ್ಷಿಸುವುದು ಮತ್ತು ಅವುಗಳ ಮೇಲೆ ಅನಧಿಕೃತ ಪೇಟೆಂಟ್ ಪಡೆಯುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ಡಿಜಿಟಲ್ ಗ್ರಂಥಾಲಯದಲ್ಲಿ 5.2 ಲಕ್ಷಕ್ಕೂ ಹೆಚ್ಚು ಸಾಂಪ್ರದಾಯಿಕ ಔಷಧಿ ಸೂತ್ರಗಳು ಮತ್ತು ಚಿಕಿತ್ಸಾ ವಿಧಾನಗಳು ದಾಖಲಾಗಿದ್ದು, ಅವುಗಳನ್ನು ಇಂಗ್ಲಿಷ್, ಜರ್ಮನ್, ಫ್ರೆಂಚ್, ಜಪಾನಿ ಹಾಗೂ ಸ್ಪ್ಯಾನಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರಿಂದ ವಿಶ್ವದ ಪೇಟೆಂಟ್ ಪರೀಕ್ಷಕರಿಗೆ ಈ ಮಾಹಿತಿಯನ್ನು ಸುಲಭವಾಗಿ ಪರಿಶೀಲಿಸಲು ಅನುಕೂಲವಾಗಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.