ಹೆಚ್ಚಿನ ಆಲ್ಕೊಹಾಲ್ ಅಂಶವಿರುವ ಔಷಧಗಳ ಮಾರಾಟಕ್ಕೆ ಕೇಂದ್ರದ ಕಠಿಣ ನಿಯಮ: ಇನ್ನು ವೈದ್ಯರ ಚೀಟಿ ಕಡ್ಡಾಯ
ನವದೆಹಲಿ, 10 ಜುಲೈ (ಹಿ.ಸ.): ಆ್ಯಂಕರ್: ಹೆಚ್ಚಿನ ಪ್ರಮಾಣದ ಇಥೈಲ್ ಆಲ್ಕೊಹಾಲ್ ಹೊಂದಿರುವ ಔಷಧಿಗಳ ಮಾರಾಟ ಮತ್ತು ವಿತರಣೆಗೆ ಕೇಂದ್ರ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಔಷಧ ನಿಯಮಗಳು–1945ಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರ, ಇನ್ನು ಮುಂದೆ ಇಂತಹ ಔಷಧಿಗಳನ್ನು ಪರವಾನಗಿ ಮತ್ತು ನೋಂದಾಯಿತ
ಸಾಂಕೇತಿಕ


ನವದೆಹಲಿ, 10 ಜುಲೈ (ಹಿ.ಸ.):

ಆ್ಯಂಕರ್:

ಹೆಚ್ಚಿನ ಪ್ರಮಾಣದ ಇಥೈಲ್ ಆಲ್ಕೊಹಾಲ್ ಹೊಂದಿರುವ ಔಷಧಿಗಳ ಮಾರಾಟ ಮತ್ತು ವಿತರಣೆಗೆ ಕೇಂದ್ರ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಔಷಧ ನಿಯಮಗಳು–1945ಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರ, ಇನ್ನು ಮುಂದೆ ಇಂತಹ ಔಷಧಿಗಳನ್ನು ಪರವಾನಗಿ ಮತ್ತು ನೋಂದಾಯಿತ ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೊಸ ನಿಯಮದ ಪ್ರಕಾರ, 12 ಶೇಕಡಕ್ಕಿಂತ ಹೆಚ್ಚು ಇಥೈಲ್ ಆಲ್ಕೊಹಾಲ್ ಹೊಂದಿರುವ ಹಾಗೂ 30 ಮಿ.ಲೀ.ಗಿಂತ ಹೆಚ್ಚಿನ ಪ್ರಮಾಣದ ಎಲ್ಲಾ ಔಷಧ ತಯಾರಿಕೆಗಳಿಗೆ ಈ ಹಿಂದೆ ಇದ್ದ ವಿನಾಯಿತಿ ರದ್ದುಗೊಂಡಿದೆ. ಇಂತಹ ಔಷಧಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.

ಕೇಂದ್ರ ಸರ್ಕಾರ ಈ ಔಷಧಿಗಳನ್ನು ಷೆಡ್ಯೂಲ್ ಎಚ್–1 ಪಟ್ಟಿಗೆ ಸೇರಿಸಿದ್ದು, ಇನ್ನು ಮುಂದೆ ನೋಂದಾಯಿತ ವೈದ್ಯರ ಔಷಧ ಚೀಟಿಯ ಮೇರೆಗೆ ಮಾತ್ರ ಇವುಗಳನ್ನು ಮಾರಾಟ ಮಾಡಬಹುದು. ಔಷಧ ಅಂಗಡಿಗಳು ಮಾರಾಟದ ಸಂಪೂರ್ಣ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗುತ್ತದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಏಲಕ್ಕಿ, ಶುಂಠಿ ಹಾಗೂ ಇತರೆ ಸುಗಂಧಯುಕ್ತ ಟಿಂಚರ್‌ಗಳಂತಹ ಕೆಲವು ಔಷಧ ತಯಾರಿಕೆಗಳಲ್ಲಿ 80ರಿಂದ 90 ಶೇಕಡದವರೆಗೆ ಇಥೈಲ್ ಆಲ್ಕೊಹಾಲ್ ಇರುತ್ತದೆ. ಕೆಲವು ರಾಜ್ಯಗಳಿಂದ ಇವುಗಳನ್ನು ಔಷಧಿಯಾಗಿ ಬಳಸುವ ಬದಲು ಅಮಲಿನ ಉದ್ದೇಶಕ್ಕೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ನಿಯಮಗಳಿಂದ ಇಂತಹ ಔಷಧಗಳ ಮಾರಾಟವು ಅಧಿಕೃತ ಔಷಧ ವಿತರಣಾ ವ್ಯವಸ್ಥೆಯ ಮೂಲಕ ಮಾತ್ರ ನಡೆಯಲಿದ್ದು, ದುರುಪಯೋಗಕ್ಕೆ ತಡೆ ಬೀಳುವ ಜೊತೆಗೆ ನಿಜವಾದ ರೋಗಿಗಳಿಗೆ ಅಗತ್ಯ ಔಷಧಗಳು ಹಿಂದಿನಂತೆಯೇ ಲಭ್ಯವಾಗಲಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande