
ಬೆಂಗಳೂರು, 30 ಜೂನ್ (ಹಿ.ಸ.) :
ಆ್ಯಂಕರ್ : ನಟ ಯಶ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾದ ಬಳಿಕ ಆನ್ಲೈನ್ ಪ್ರಚಾರವೂ ವೇಗ ಪಡೆದುಕೊಂಡಿದ್ದು, ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಅವರ ಎರಡೂ ಪಾತ್ರಗಳನ್ನು ಪರಿಚಯಿಸುವ ಟೀಸರ್ ಬಿಡುಗಡೆಗೊಂಡಿದೆ. ಆದರೆ ಸಿನಿಮಾದಲ್ಲಿ ಐವರು ನಾಯಕಿಯರು ಇದ್ದರೂ ಅವರ ಪಾತ್ರಗಳ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಯಶ್ ಅವರ ಪಾತ್ರವನ್ನಷ್ಟೇ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕಿಸಿದ್ದರು.
ಈ ಟೀಕೆಗಳಿಗೆ ಇದೀಗ ಸ್ವತಃ ಯಶ್ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, Where is the ladies? ಎಂದು ಪ್ರಶ್ನಿಸಿದವರಿಗೆ ಉತ್ತರ ನೀಡಿದ್ದಾರೆ.
ಮಹಿಳೆಯರು ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಜುಲೈ 1ರಂದು ಅವರು ಬರುತ್ತಾರೆ. ಸ್ವಲ್ಪ ಬಿಡುವು ಮಾಡಿಕೊಂಡು ಬನ್ನಿ ಎಂದು ಯಶ್ ಬರೆದುಕೊಂಡಿದ್ದಾರೆ. ಜೊತೆಗೆ ಕೆವಿಎನ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ನ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.