
ಮೈಸೂರು, 28 ಜೂನ್ (ಹಿ.ಸ.) :
ಆ್ಯಂಕರ್ : ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಮೈಸೂರಿನಲ್ಲಿ ನಡೆದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗವು 1950ರಲ್ಲಿ ಸ್ಥಾಪನೆಯಾಗಿ, 1952ರಿಂದ ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತ ಬಂದಿದೆ. ಆದರೆ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಧಿಕಾರ ಆಯೋಗಕ್ಕಿಲ್ಲ. ಆಯೋಗವು ಸಂವಿಧಾನಬದ್ಧವಾಗಿ ಕೆಲಸ ಮಾಡಬೇಕಿದ್ದು, ಇತ್ತೀಚಿನ ವರ್ಷಗಳಲ್ಲಿ ಅದರ ಕಾರ್ಯವೈಖರಿಯಲ್ಲಿ ಬದಲಾವಣೆ ಕಂಡುಬರುತ್ತಿದೆ ಎಂದು ಅವರು ಆರೋಪಿಸಿದರು.
ದೇಶದಲ್ಲಿ 141 ಕೋಟಿ ಜನಸಂಖ್ಯೆಯಿದ್ದು, ಸುಮಾರು 96 ಕೋಟಿ ಮತದಾರರಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಸಾವಿರದಿಂದ ಐದು ಸಾವಿರ ಮತಗಳ ಅಂತರದಲ್ಲಿ ಗೆಲುವು-ಸೋಲು ನಿರ್ಧಾರವಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾವಿರಾರು ಮತಗಳನ್ನು ಪಟ್ಟಿಯಿಂದ ಕೈಬಿಟ್ಟರೆ ಚುನಾವಣಾ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ಗೆ ಬೆಂಬಲ ನೀಡುವ ಬಡವರು, ರೈತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿ ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಜೂನ್ 30ರಿಂದ ಜುಲೈ 29ರವರೆಗೆ ನಡೆಯುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕರು ಹಾಗೂ ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರಿಗೆ ನೆರವಾಗಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ಬಿಜೆಪಿ ಕೇವಲ ಶೇ.36ರಷ್ಟು ಮತಗಳನ್ನು ಪಡೆದಿದ್ದು, ಶೇ.64ರಷ್ಟು ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ. ಈ ಮತಗಳಲ್ಲಿ ಕೆಲವನ್ನು ಕೈಬಿಟ್ಟರೆ ಚುನಾವಣಾ ಫಲಿತಾಂಶವೇ ಬದಲಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಒನ್ ನೇಷನ್, ಒನ್ ಎಲೆಕ್ಷನ್ ಸೇರಿದಂತೆ ಹಲವು ನೀತಿಗಳ ಮೂಲಕ ಅಧಿಕಾರ ಕೇಂದ್ರೀಕರಣದ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಸುಳ್ಳು ಮಾಹಿತಿಯನ್ನು ಸೃಷ್ಟಿಸಿ ಅದನ್ನೇ ಸತ್ಯವಾಗಿ ಬಿಂಬಿಸುವ ರಾಜಕಾರಣ ಮಾಡುತ್ತಿದೆ ಎಂದರು.
ಹರಿಯಾಣ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆಯ ಪರಿಣಾಮ ಅಲ್ಲಿ ಕಂಡುಬಂದಿದೆ ಎಂದು ಆರೋಪಿಸಿದರು. ಕೇರಳದಲ್ಲಿ ಮಾತ್ರ ಇಂತಹ ಪ್ರಯತ್ನ ಯಶಸ್ವಿಯಾಗಿಲ್ಲ ಎಂದು ಹೇಳಿದರು.
ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಯಾವುದೇ ಕ್ರಮಕ್ಕೂ ಹಿಂದೆಮುಂದೆ ನೋಡುವುದಿಲ್ಲ ಎಂದು ಆರೋಪಿಸಿದ ಸಿದ್ದರಾಮಯ್ಯ, ಸಂಘ ಪರಿವಾರದ ವಿಚಾರಧಾರೆ, ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ವಿನಾಯಕ ದಾಮೋದರ ಸಾವರ್ಕರ್ ಕುರಿತೂ ಟೀಕೆ ವ್ಯಕ್ತಪಡಿಸಿದರು.
ಮುಂದಿನ ಒಂದು ತಿಂಗಳು ಎಲ್ಲಾ ಕಾಂಗ್ರೆಸ್ ನಾಯಕರು, ಹಾಲಿ-ಮಾಜಿ ಶಾಸಕರು, ಸಂಸದರು ಹಾಗೂ ಕಾರ್ಯಕರ್ತರು ಎಸ್ಐಆರ್ ಪ್ರಕ್ರಿಯೆಯ ಮೇಲೆ ನಿಗಾ ವಹಿಸಿ, ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಪ್ರತಿ ಬೂತ್ನಲ್ಲಿ ಸ್ಥಳೀಯ ಮತದಾರರೊಂದಿಗೆ ಸಮನ್ವಯ ಸಾಧಿಸಿ, ಮತದಾರರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿಸಿ, ಸ್ವೀಕೃತಿ ಪತ್ರ ಪಡೆಯುವಂತೆ ಸೂಚಿಸಿದ ಅವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.