
ಬೆಂಗಳೂರು, 28 ಜೂನ್ (ಹಿ.ಸ.) :
ಆ್ಯಂಕರ್ : 2028ರ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಹಾಗೂ 2029ರ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದಕ್ಕೆ ದೇಶದ ಕಾರ್ಮಿಕರು ಮತ್ತು ಜನಸಾಮಾನ್ಯರ ಬೆಂಬಲ ಅಗತ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಕಚೇರಿಯ ಭಾರತ್ ಜೋಡೊ ಸಭಾಂಗಣದಲ್ಲಿ ಭಾನುವಾರ ನಡೆದ ಐಎನ್ಟಿಯುಸಿ (ಇಂಟೆಕ್) 316ನೇ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಇಂಟೆಕ್ ಸಂಘಟನೆ ಕಾಂಗ್ರೆಸ್ ಪಕ್ಷದ ಪ್ರಮುಖ ಅಂಗವಾಗಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಂಟೆಕ್, ಎನ್ಎಸ್ಯುಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ಗಳನ್ನು ಪಕ್ಷದ ನಾಲ್ಕು ಪ್ರಮುಖ ಆಧಾರ ಸ್ತಂಭಗಳೆಂದು ಬಣ್ಣಿಸಿದ್ದರು. ತಾವು ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿದ ಕಾರಣ ಸಂಘಟನೆಯ ಶಕ್ತಿಯ ಅರಿವು ಇದೆ ಎಂದು ಹೇಳಿದರು.
ಕಾರ್ಮಿಕರೇ ದೇಶದ ಅಭಿವೃದ್ಧಿಯ ಶಕ್ತಿ
ಕೃಷಿಕ, ಶಿಕ್ಷಕ, ಸೈನಿಕ ಹಾಗೂ ಕಾರ್ಮಿಕರಿಲ್ಲದೆ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ದೇಶದ ಆರ್ಥಿಕ ಪ್ರಗತಿಗೆ ಕಾರ್ಮಿಕರ ಶ್ರಮವೇ ಮೂಲಾಧಾರವಾಗಿದೆ. ಉದ್ಯಮಿಗಳು ಮತ್ತು ಕಾರ್ಮಿಕರು ಪರಸ್ಪರ ಸಹಕಾರದಿಂದ ಮುಂದೆ ಸಾಗಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಿವಕುಮಾರ್ ಹೇಳಿದರು.
ಎಸ್ಐಆರ್ ವೇಳೆ ಎಚ್ಚರಿಕೆಯಿಂದಿರಿ
ಜೂನ್ 30ರಿಂದ ಆರಂಭವಾಗಲಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕುರಿತು ಮಾತನಾಡಿದ ಅವರು, ಕಾರ್ಮಿಕರು ಸೇರಿದಂತೆ ಎಲ್ಲ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿದಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕು ರಕ್ಷಿಸಲು ಎಲ್ಲರೂ ಜಾಗೃತರಾಗಿರಬೇಕು ಎಂದು ಹೇಳಿದರು.
ಕಾರ್ಮಿಕರ ಕಲ್ಯಾಣಕ್ಕೆ ಕಾಂಗ್ರೆಸ್ನ ಕೊಡುಗೆ
ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಸರ್ಕಾರಗಳು ಹಲವು ಐತಿಹಾಸಿಕ ಕ್ರಮಗಳನ್ನು ಕೈಗೊಂಡಿವೆ ಎಂದು ಹೇಳಿದ ಅವರು, ಆಸ್ಕರ್ ಫರ್ನಾಂಡಿಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದ ಅವಧಿಯಲ್ಲಿ ಕಾರ್ಮಿಕ ಕಲ್ಯಾಣ ಯೋಜನೆಗಳಿಗೆ ಹೊಸ ಆಯಾಮ ದೊರೆಯಿತು ಎಂದರು.
ಇಎಸ್ಐ ಆಸ್ಪತ್ರೆಗಳ ಅಭಿವೃದ್ಧಿ, ಕಾರ್ಮಿಕರ ಮಕ್ಕಳಿಗೆ ಉಚಿತ ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ಯೋಜನೆಗಳು ಅವರ ಅವಧಿಯಲ್ಲಿ ಜಾರಿಯಾದವು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಆಸರೆ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಕಾರ್ಮಿಕರು, ಮಹಿಳೆಯರು ಹಾಗೂ ಬಡ ಜನರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುತ್ತಿವೆ. ಬೆಲೆ ಏರಿಕೆಯ ಹೊರೆ ತಗ್ಗಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಈ ಯೋಜನೆಗಳಿಗೆ ಪ್ರತಿ ವರ್ಷ ₹50 ಸಾವಿರ ಕೋಟಿಗೂ ಅಧಿಕ ವೆಚ್ಚ ಮಾಡಲಾಗುತ್ತಿದ್ದು, ಆರಂಭದಲ್ಲಿ ಟೀಕಿಸಿದ್ದವರೇ ಈಗ ಇದೇ ಮಾದರಿಯ ಯೋಜನೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ದೇಶ ಕಟ್ಟಿದ ಪಕ್ಷ
ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸವಾಗಿದೆ. ಜವಾಹರಲಾಲ್ ನೆಹರು ಅವರ ಕಾಲದಿಂದ ದೇಶ ನಿರ್ಮಾಣ, ಸಂವಿಧಾನದ ಮೌಲ್ಯಗಳ ರಕ್ಷಣೆ ಹಾಗೂ ಸಮಾಜದ ಎಲ್ಲ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಶಿವಕುಮಾರ್ ಹೇಳಿದರು.
ದೇಶ ಇಂದು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಕರ್ನಾಟಕ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಬೆಂಗಳೂರು ಜಾಗತಿಕ ಐಟಿ ಕೇಂದ್ರವಾಗಿ ಬೆಳೆದಿದ್ದು, ಸುಮಾರು 25 ಲಕ್ಷ ಐಟಿ ವೃತ್ತಿಪರರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.