ಸೆಶೆಲ್ಸ್ ಗೆ ಪ್ರಧಾನಿ ಮೋದಿ ಮೂರು ದಿನಗಳ ಭೇಟಿ
ಸೆಶೆಲ್ಸ್
Pm


ನವದೆಹಲಿ, 27 ಜೂನ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಮೂರು ದಿನಗಳ ಅಧಿಕೃತ ರಾಜಕೀಯ ಭೇಟಿಗಾಗಿ ಸೆಶೆಲ್ಸ್ ದೇಶಕ್ಕೆ ತೆರಳಿದ್ದಾರೆ. ಭಾರತ ಮತ್ತು ಸೆಶೆಲ್ಸ್ ನಡುವಿನ ದೀರ್ಘಕಾಲದ ಸ್ನೇಹ, ಸಮುದ್ರ ಭದ್ರತಾ ಸಹಕಾರ ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಈ ಭೇಟಿ ಮಹತ್ವದ್ದಾಗಿದೆ.

ವಿದೇಶಾಂಗ ಸಚಿವಾಲಯದ ಮಾಹಿತಿಯ ಪ್ರಕಾರ, ಸೆಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹೆರ್ಮಿನಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಈ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಸೆಶೆಲ್ಸ್ ತನ್ನ ರಾಷ್ಟ್ರೀಯ ದಿನದ ಸುವರ್ಣ ಮಹೋತ್ಸವ (50ನೇ ವಾರ್ಷಿಕೋತ್ಸವ) ಆಚರಿಸುತ್ತಿದ್ದು, ಅದರ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ಅವರು ಈ ಹಿಂದೆ 2015ರಲ್ಲಿ ಸೆಶೆಲ್ಸ್ಗೆ ಭೇಟಿ ನೀಡಿದ್ದರು. ಪ್ರಸ್ತುತ ಭೇಟಿಯ ಸಂದರ್ಭದಲ್ಲಿ ಅವರು ಅಧ್ಯಕ್ಷ ಡಾ. ಪ್ಯಾಟ್ರಿಕ್ ಹೆರ್ಮಿನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ನಡುವಿನ ಸಹಕಾರದ ವಿವಿಧ ಕ್ಷೇತ್ರಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಜೊತೆಗೆ ಪ್ರಾದೇಶಿಕ ಮತ್ತು ಜಾಗತಿಕ ಮಹತ್ವದ ವಿಷಯಗಳ ಕುರಿತು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಭೇಟಿಯ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಸೆಶೆಲ್ಸ್ ರಾಷ್ಟ್ರೀಯ ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಅಲ್ಲಿನ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.

ಭಾರತ ಮತ್ತು ಸೆಶೆಲ್ಸ್ ನಡುವಿನ ಸಮುದ್ರ ಭದ್ರತೆ, ಅಭಿವೃದ್ಧಿ ಸಹಕಾರ, ವ್ಯಾಪಾರ ಹಾಗೂ ಜನರಿಂದ ಜನರಿಗೆ ಇರುವ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande