ಅಸ್ಸಾಂನ ಧನಸಿರಿ ನದಿಯ ಮೇಲಿನ ಹೊಸ ಸೇತುವೆ–ರಸ್ತೆ ಯೋಜನೆ ; 40ಕ್ಕೂ ಹೆಚ್ಚು ಗ್ರಾಮಗಳ ಬದುಕಿಗೆ ಹೊಸ ದಿಕ್ಕು
ಕಾರ್ಬಿ ಆಂಗ್ಲಾಂಗ್ (ಅಸ್ಸಾಂ), 26 ಜೂನ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರದ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯದ ‘ಉತ್ತರ ಪೂರ್ವ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ’ ಅಡಿಯಲ್ಲಿ ಅಸ್ಸಾಂನ ಪೂರ್ವ ಕಾರ್ಬಿ ಆಂಗ್ಲಾಂಗ್ ಹಾಗೂ ಗೋಲಾಘಾಟ್ ಜಿಲ್ಲೆಗಳನ್ನು ಸಂಪರ್ಕಿಸುವ ಧನಸಿರಿ ನದಿಯ ಮೇಲಿನ ಹ
ಅಸ್ಸಾಂನ ಧನಸಿರಿ ನದಿಯ ಮೇಲಿನ ಹೊಸ ಸೇತುವೆ–ರಸ್ತೆ


ಕಾರ್ಬಿ ಆಂಗ್ಲಾಂಗ್ (ಅಸ್ಸಾಂ), 26 ಜೂನ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರದ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯದ ‘ಉತ್ತರ ಪೂರ್ವ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ’ ಅಡಿಯಲ್ಲಿ ಅಸ್ಸಾಂನ ಪೂರ್ವ ಕಾರ್ಬಿ ಆಂಗ್ಲಾಂಗ್ ಹಾಗೂ ಗೋಲಾಘಾಟ್ ಜಿಲ್ಲೆಗಳನ್ನು ಸಂಪರ್ಕಿಸುವ ಧನಸಿರಿ ನದಿಯ ಮೇಲಿನ ಹೊಸ ಆರ್ಸಿಸಿ ಸೇತುವೆ ಮತ್ತು ಡಾಂಬರೀಕೃತ ರಸ್ತೆ ಯೋಜನೆ 40ಕ್ಕೂ ಹೆಚ್ಚು ಗ್ರಾಮಗಳ ಸುಮಾರು 45 ಸಾವಿರಕ್ಕೂ ಅಧಿಕ ಜನರ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತಂದಿದೆ.

ಈ ಯೋಜನೆಯಿಂದ ಸ್ಥಳೀಯ ಬುಡಕಟ್ಟು ಸಮುದಾಯಗಳು ಮತ್ತು ಗ್ರಾಮೀಣ ನಿವಾಸಿಗಳಿಗೆ ಸುರಕ್ಷಿತ, ಸುಗಮ ಹಾಗೂ ವರ್ಷಪೂರ್ತಿ ಸಂಪರ್ಕ ವ್ಯವಸ್ಥೆ ಲಭ್ಯವಾಗಿದೆ.

ದಶಕಗಳ ಕಾಲ ಈ ಪ್ರದೇಶದ ಜನರು ಬಿದಿರಿನಿಂದ ನಿರ್ಮಿಸಲಾದ ತಾತ್ಕಾಲಿಕ ಸೇತುವೆಯನ್ನೇ ಅವಲಂಬಿಸಬೇಕಾಗಿತ್ತು. ಮಳೆಗಾಲದಲ್ಲಿ ನಾಗಾಲ್ಯಾಂಡ್ನ ಲೈಸಾಂಗ್ ಪ್ರದೇಶದಿಂದ ಹರಿದುಬರುವ ಧನಸಿರಿ ನದಿಯಲ್ಲಿ ಪ್ರವಾಹ ಉಂಟಾದಾಗ ಸಂಪೂರ್ಣ ಪ್ರದೇಶ ದೇಶದ ಇತರ ಭಾಗಗಳಿಂದ ಸಂಪರ್ಕ ಕಳೆದುಕೊಳ್ಳುತ್ತಿತ್ತು.

ಅನಾರೋಗ್ಯಕ್ಕೊಳಗಾದವರು, ಗರ್ಭಿಣಿಯರು ಹಾಗೂ ವೃದ್ಧರನ್ನು ಆಸ್ಪತ್ರೆಗೆ ಕರೆದೊಯ್ಯಲು ಜನರು ಜೀವದ ಹಂಗು ತೊರೆದು ಸಣ್ಣ ದೋಣಿಗಳನ್ನು ಬಳಸಬೇಕಾಗುತ್ತಿತ್ತು.

ಈ ಕುರಿತು ಸ್ಥಳೀಯ ನಿವಾಸಿ ನುವಲಶ್ಯಾಮ್ ಮಾತನಾಡಿ, “ಕಳೆದ 30–40 ವರ್ಷಗಳಿಂದ ಕಚ್ಚಾ ರಸ್ತೆ ಮತ್ತು ಬಿದಿರಿನ ಸೇತುವೆಯೇ ನಮ್ಮ ಬದುಕಿನ ಆಧಾರವಾಗಿತ್ತು. ಈಗ ಬಲಿಷ್ಠ ಆರ್ಸಿಸಿ ಸೇತುವೆ ಮತ್ತು ಪಕ್ಕಾ ರಸ್ತೆ ನಿರ್ಮಾಣವಾದ ಬಳಿಕ ನಮ್ಮ ದಶಕಗಳ ಸಂಕಷ್ಟ ಅಂತ್ಯಗೊಂಡಿದೆ. ನಾವು ಈಗ ದೇಶದ ಮುಖ್ಯವಾಹಿನಿಯೊಂದಿಗೆ ಶಾಶ್ವತವಾಗಿ ಸಂಪರ್ಕ ಹೊಂದಿದ್ದೇವೆ,” ಎಂದು ಹೇಳಿದರು.

ರೈತರ ಆದಾಯದಲ್ಲಿ 60% ಏರಿಕೆ

ಯೋಜನೆ ಪೂರ್ಣಗೊಳ್ಳುವ ಮೊದಲು ರಸ್ತೆ ಮತ್ತು ಸೇತುವೆಯ ಕೊರತೆಯಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಮಯಕ್ಕೆ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಸಾಕಷ್ಟು ನಷ್ಟವಾಗುತ್ತಿತ್ತು. ಆದರೆ ಹೊಸ ರಸ್ತೆ ಸಂಚಾರಕ್ಕೆ ಮುಕ್ತವಾದ ಬಳಿಕ ರೈತರ ಒಟ್ಟು ಕೃಷಿ ಲಾಭದಲ್ಲಿ ಸುಮಾರು 60 ಶೇಕಡಾ ಹೆಚ್ಚಳ ದಾಖಲಾಗಿದೆ. ಚಹಾ, ರಬ್ಬರ್, ಬಿದಿರು ಮತ್ತು ಅಗರ್ ಮರದಂತಹ ಉತ್ಪನ್ನಗಳು ಈಗ ವೇಗವಾಗಿ ಪ್ರಮುಖ ಮಾರುಕಟ್ಟೆಗಳನ್ನು ತಲುಪುತ್ತಿವೆ.

ಶಿಕ್ಷಣಕ್ಕೂ ಹೊಸ ಚೈತನ್ಯ

ಹಿಂದೆ ಮಳೆಗಾಲದಲ್ಲಿ ರಸ್ತೆಗಳು ಕೆಸರಿನಿಂದ ತುಂಬಿ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶಾಲೆ–ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈಗ ವರ್ಷಪೂರ್ತಿ ಸಂಚಾರ ಸಾಧ್ಯವಾಗಿರುವುದರಿಂದ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಉನ್ನತ ಶಿಕ್ಷಣದತ್ತ ಆಸಕ್ತಿ ಸುಮಾರು 40 ಶೇಕಡಾ ಹೆಚ್ಚಾಗಿದೆ.

ಪ್ರತಿದಿನ 10 ಸಾವಿರ ಜನರ ಸಂಚಾರ

ಈ ಹಿಂದೆ ಮಳೆಗಾಲದಲ್ಲಿ ಸಂಪೂರ್ಣ ಸ್ಥಗಿತವಾಗುತ್ತಿದ್ದ ಈ ಮಾರ್ಗದಲ್ಲಿ ಈಗ ಪ್ರತಿದಿನ ಸುಮಾರು 10 ಸಾವಿರ ಮಂದಿ ಸುಗಮವಾಗಿ ಸಂಚರಿಸುತ್ತಿದ್ದಾರೆ. ಸಂಜೆ 6 ಗಂಟೆಯ ನಂತರವೂ 200ಕ್ಕೂ ಹೆಚ್ಚು ಭಾರೀ ಲಾರಿಗಳು ಚಹಾ, ಅಗರ್ ಮರ, ಬಿದಿರು ಹಾಗೂ ರಬ್ಬರ್ ಉತ್ಪನ್ನಗಳನ್ನು ದೇಶದ ವಿವಿಧ ಮಾರುಕಟ್ಟೆಗಳಿಗೆ ಸಾಗಿಸುತ್ತಿವೆ.

ಆರೋಗ್ಯ ಸೇವೆ ಸುಲಭ

ಇನ್ನೋರ್ವ ಸ್ಥಳೀಯ ನಿವಾಸಿ ಅಭಿಜಿತ್ ಧುಲೆ ಮಾತನಾಡಿ, “ಸೇತುವೆ ನಿರ್ಮಾಣದಿಂದ ಧನಸಿರಿ ನದಿಯ ಎರಡೂ ದಡಗಳ ಜನರು ವರ್ಷಪೂರ್ತಿ ಪರಸ್ಪರ ಸಂಪರ್ಕ ಹೊಂದಿದ್ದಾರೆ. ಈಗ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಹೊರಗೆ ಕಳುಹಿಸುವುದು ಸುಲಭವಾಗಿದೆ. ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ನೇರವಾಗಿ ಗ್ರಾಮಕ್ಕೆ ಬರುತ್ತಿದೆ. ಆರೋಗ್ಯ ಸೇವೆಗಳೂ ಸುಲಭವಾಗಿ ದೊರೆಯುತ್ತಿವೆ,” ಎಂದು ಹೇಳಿದರು.

ರೈತರಿಗೆ ನೇರ ಮಾರುಕಟ್ಟೆ ಸಂಪರ್ಕ

ಈ ಭಾಗದ ಕಾರ್ಬಿ, ಅಹೋಂ, ನೇಪಾಳಿ, ಬೊಡೋ, ಮಿಸಿಂಗ್, ಖಾಮಯಾಂಗ್ ಹಾಗೂ ಚಹಾ ತೋಟಗಳ ಬುಡಕಟ್ಟು ಸಮುದಾಯದ ರೈತರಿಗೆ ಈಗ ದಿಫು, ಗುವಾಹಟಿ, ಗೋಲಾಘಾಟ್ ಹಾಗೂ ನಾಗಾಲ್ಯಾಂಡ್ನ ಪ್ರಮುಖ ವ್ಯಾಪಾರ ಕೇಂದ್ರಗಳಿಗೆ ನೇರ ಸಂಪರ್ಕ ದೊರೆತಿದೆ. ಸಾರಿಗೆ ವೆಚ್ಚ ಕಡಿಮೆಯಾಗಿದ್ದು, ಬೆಳೆ ಹಾಳಾಗುವ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಮತ್ತು ನ್ಯಾಯಯುತ ಬೆಲೆ ಪಡೆಯುತ್ತಿದ್ದಾರೆ.

ಉದ್ಯೋಗ ಮತ್ತು ಸ್ವಸಹಾಯ ಗುಂಪುಗಳಿಗೆ ಉತ್ತೇಜನ

ಉತ್ತಮ ಸಂಪರ್ಕ ವ್ಯವಸ್ಥೆಯಿಂದ ಅಂತರಜಿಲ್ಲಾ ವ್ಯಾಪಾರ ಹಾಗೂ ಸ್ಥಳೀಯ ಸಣ್ಣ ಕೈಗಾರಿಕೆಗಳಿಗೆ ಹೊಸ ಚೈತನ್ಯ ದೊರೆತಿದೆ. ಯುವಕರು ಹಾಗೂ ಸ್ವಸಹಾಯ ಗುಂಪುಗಳಿಗೆ ಹೊಸ ಉದ್ಯೋಗ ಮತ್ತು ಸ್ವಾವಲಂಬನೆಯ ಅವಕಾಶಗಳು ಸೃಷ್ಟಿಯಾಗುತ್ತಿವೆ. ಜೊತೆಗೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸೇವೆಗಳು ಗ್ರಾಮಗಳ ಕೊನೆಯ ವ್ಯಕ್ತಿಗೂ ಸುಲಭವಾಗಿ ತಲುಪುತ್ತಿವೆ.

ಭದ್ರತೆ ಮತ್ತು ಪ್ರವಾಸೋದ್ಯಮಕ್ಕೂ ನೆರವು

ಅಸ್ಸಾಂ–ನಾಗಾಲ್ಯಾಂಡ್ ಗಡಿಭಾಗದಲ್ಲಿ ಹಿಂದೆ ಉಗ್ರವಾದದ ಪರಿಣಾಮ ಭದ್ರತಾ ಪಡೆಗಳ ಸಂಚಾರಕ್ಕೆ ಭೌಗೋಳಿಕ ಅಡಚಣೆಗಳಿದ್ದವು. ಹೊಸ ಸೇತುವೆ ನಿರ್ಮಾಣದಿಂದ ಪೊಲೀಸ್ ಹಾಗೂ ಅರೆಸೈನಿಕ ಪಡೆಗಳು ತ್ವರಿತವಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿದ್ದು, ಅಕ್ರಮ ಚಟುವಟಿಕೆ, ಕಳ್ಳಸಾಗಣೆ ಹಾಗೂ ಅತಿಕ್ರಮಣ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ಇದಲ್ಲದೆ, ಈ ಮಾರ್ಗದಿಂದ ಕೇವಲ 7 ಕಿ.ಮೀ. ದೂರದಲ್ಲಿರುವ ನಾಂಬೋರ್ ವನ್ಯಜೀವಿ ಅಭಯಾರಣ್ಯದ ಬಿಸಿನೀರಿನ ಬುಗ್ಗೆಗಳು ಹಾಗೂ 8 ಕಿ.ಮೀ. ದೂರದ ದೇವಪಾನಿಯ ಐತಿಹಾಸಿಕ ದುರ್ಗಾ ದೇವಾಲಯಕ್ಕೆ ಪ್ರವಾಸಿಗರು ಮತ್ತು ಭಕ್ತರು ಸುಲಭವಾಗಿ ತಲುಪುತ್ತಿದ್ದು, ಸ್ಥಳೀಯ ಹೋಟೆಲ್, ಸಾರಿಗೆ ಹಾಗೂ ಕರಕುಶಲ ವಸ್ತುಗಳ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ ದೊರೆಯುತ್ತಿದೆ.

ಯೋಜನೆಯ ವಿವರ

ಅಸ್ಸಾಂ ಸರ್ಕಾರದ ಲೋಕೋಪಯೋಗಿ ಇಲಾಖೆಯ ಬಾರಪಾಥರ್ ವಿಭಾಗ ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ–39ರ ಸಿಲೋನಿಜಾನ್ ರಾಜ್ಯ ಚಿಕಿತ್ಸಾಲಯದಿಂದ ಪನಿಯಾಕಾ ಬಸ್ತಿ ಮೂಲಕ ಧನಸಿರಿ ಪಾರ್ ಘಾಟ್ವರೆಗೆ ಒಟ್ಟು 4 ಕಿ.ಮೀ. ಉದ್ದದಲ್ಲಿ ನಿರ್ಮಿಸಿದೆ. ಇದರ ಪ್ರಮುಖ ಆಕರ್ಷಣೆಯಾದ 102 ಮೀಟರ್ ಉದ್ದದ ಆಧುನಿಕ ಆರ್ಸಿಸಿ ಸೇತುವೆ ಈ ಪ್ರದೇಶದ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.

ಈ ಯೋಜನೆಗೆ 2022ರ ಏಪ್ರಿಲ್ 20ರಂದು ₹20.59 ಕೋಟಿ ಆಡಳಿತಾತ್ಮಕ ಮತ್ತು ಹಣಕಾಸು ಅನುಮೋದನೆ ದೊರೆಯಿತು. 2022ರ ಅಕ್ಟೋಬರ್ 19ರಂದು ಕಾಮಗಾರಿ ಆರಂಭಗೊಂಡಿದ್ದು, 2025ರ ಅಕ್ಟೋಬರ್ಗೆ ಪೂರ್ಣಗೊಳಿಸುವ ಗಡುವು ನಿಗದಿಯಾಗಿತ್ತು. ಆದರೆ ಆಡಳಿತದ ತ್ವರಿತ ಕಾರ್ಯಾಚರಣೆಯಿಂದ ಯೋಜನೆಯನ್ನು 2025ರ ಜನವರಿಯಲ್ಲೇ ಶೇ.100ರಷ್ಟು ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande