
ನವದೆಹಲಿ, 25 ಜೂನ್ (ಹಿ.ಸ.) :
ಆ್ಯಂಕರ್ : 1975ರಲ್ಲಿ ಘೋಷಿಸಲಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿ, ಸಂವಿಧಾನದ ಆತ್ಮವನ್ನು ಕಾಪಾಡಲು ದೃಢವಾಗಿ ನಿಂತ ಎಲ್ಲ ಧೀರರಿಗೆ ಸಂವಿಧಾನ ಹತ್ಯಾ ದಿನದ ಅಂಗವಾಗಿ ತಮ್ಮ ವಿನಮ್ರ ನಮನಗಳನ್ನು ಸಲ್ಲಿಸುತ್ತೇನೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾದ 1975ರ ತುರ್ತು ಪರಿಸ್ಥಿತಿಯನ್ನು ಸ್ಮರಿಸಿದ್ದಾರೆ.
ತುರ್ತು ಪರಿಸ್ಥಿತಿ ಎನ್ನುವುದು ಸಂವಿಧಾನಿಕ ಮೌಲ್ಯಗಳು ತೀವ್ರ ಪರೀಕ್ಷೆಗೆ ಒಳಗಾದ ಕಾಲಘಟ್ಟದ ನೆನಪಾಗಿದೆ. ಆ ಸಂದರ್ಭದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಾಗಿತ್ತು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಕೇಂದ್ರಬಿಂದುವಾಗಿರುವ ಸಂಸ್ಥೆಗಳ ಕಾರ್ಯಕ್ಷಮತೆಯೂ ದುರ್ಬಲಗೊಳಿಸಲ್ಪಟ್ಟಿತ್ತು ಎಂದು ಅವರು ಹೇಳಿದ್ದಾರೆ.
ಭಾರತದ ಸಂವಿಧಾನವೇ ನಮ್ಮ ಮಾರ್ಗದರ್ಶಕ ಬೆಳಕು ಎಂದು ಉಲ್ಲೇಖಿಸಿದ ಉಪರಾಷ್ಟ್ರಪತಿ, ಅದರ ಆದರ್ಶಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳ ಬಗ್ಗೆ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸೋಣ ಎಂದು ಕರೆ ನೀಡಿದ್ದಾರೆ.
ಸಂವಿಧಾನದ ತತ್ವಗಳನ್ನು ಆಧಾರವಾಗಿಸಿಕೊಂಡು ನ್ಯಾಯಸಮ್ಮತ, ಸ್ವತಂತ್ರ, ಸಮಾನತೆಯ ಮತ್ತು ಸೌಹಾರ್ದತೆಯ ಭಾರತ ನಿರ್ಮಾಣದತ್ತ ನಾವು ನಿರಂತರವಾಗಿ ಸಾಗಬೇಕು ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.