6ನೇ ತರಗತಿ ಕನ್ನಡ ಪಠ್ಯಪುಸ್ತಕ ವಿವಾದ ; ಎನ್ಸಿಇಆರ್ಟಿ ಸ್ಪಷ್ಟನೆ
ನವದೆಹಲಿ, 25 ಜೂನ್ (ಹಿ.ಸ.) : ಆ್ಯಂಕರ್ : 6ನೇ ತರಗತಿಯ ಕನ್ನಡ ಭಾಷೆಯ ಆರ್–3 (R3) ಪಠ್ಯಪುಸ್ತಕದ ಶೀರ್ಷಿಕೆ ಹಾಗೂ ಅದರಲ್ಲಿನ ಆಹಾರ ವಿಷಯದ ಕುರಿತು ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಆತಂಕಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಸ್ಪಷ್ಟನೆ ನೀಡಿ
Ncert press release


ನವದೆಹಲಿ, 25 ಜೂನ್ (ಹಿ.ಸ.) :

ಆ್ಯಂಕರ್ : 6ನೇ ತರಗತಿಯ ಕನ್ನಡ ಭಾಷೆಯ ಆರ್–3 (R3) ಪಠ್ಯಪುಸ್ತಕದ ಶೀರ್ಷಿಕೆ ಹಾಗೂ ಅದರಲ್ಲಿನ ಆಹಾರ ವಿಷಯದ ಕುರಿತು ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಆತಂಕಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಸ್ಪಷ್ಟನೆ ನೀಡಿದೆ.

ಎನ್ಸಿಇಆರ್ಟಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಕನ್ನಡ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂಬ ಹೆಸರನ್ನು ನೀಡಿರುವುದಕ್ಕೆ ಕಾರಣವನ್ನು ವಿವರಿಸಿದೆ. ದೇಶದ ವಿವಿಧ ಭಾಷಾ ಪಠ್ಯಪುಸ್ತಕಗಳಿಗೆ ಭಾರತದ ಪ್ರಮುಖ ನದಿಗಳ ಹೆಸರನ್ನು ಇಡಲಾಗಿದೆ ಎಂದು ತಿಳಿಸಿರುವ ಸಂಸ್ಥೆ, ಕನ್ನಡ ಪಠ್ಯಪುಸ್ತಕಕ್ಕೆ ಕರ್ನಾಟಕದ ಪ್ರಮುಖ ನದಿಗಳಲ್ಲೊಂದಾದ ಕೃಷ್ಣಾ ನದಿಯ ಹೆಸರನ್ನು ನೀಡಲಾಗಿದೆ ಎಂದು ಹೇಳಿದೆ.

ಹಿಂದಿ ಪಠ್ಯಪುಸ್ತಕಕ್ಕೆ ‘ಗಂಗಾ’, ಇಂಗ್ಲಿಷ್ ಪಠ್ಯಪುಸ್ತಕಕ್ಕೆ ‘ಕಾವೇರಿ’ ಹಾಗೂ ಉರ್ದು ಪಠ್ಯಪುಸ್ತಕಕ್ಕೆ ‘ಜಮುನಾ’ ಎಂಬ ಹೆಸರುಗಳನ್ನು ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ–2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ರೂಪರೇಖೆ–2023ರ ಆಶಯಗಳಿಗೆ ಅನುಗುಣವಾಗಿ ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ಭಾಷಾ ನೆಲೆಯೊಂದಿಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಉದ್ದೇಶದಿಂದ ಈ ಹೆಸರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಎನ್ಸಿಇಆರ್ಟಿ ತಿಳಿಸಿದೆ.

ಆಹಾರ ಪದ್ಧತಿಗೆ ಸಂಬಂಧಿಸಿದ ವಿವಾದದ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆ, ಪಠ್ಯಪುಸ್ತಕದ 6ನೇ ಅಧ್ಯಾಯದಲ್ಲಿ ಸಮತೋಲಿತ ಆಹಾರ ಕುರಿತು ಸಮಗ್ರವಾಗಿ ವಿವರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ‘ಆರೋಗ್ಯವೇ ಸಂಪತ್ತು’ ಎಂಬ ಅಧ್ಯಾಯದ ಆರಂಭಿಕ ಭಾಗದಲ್ಲಿಯೇ ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರ, ವ್ಯಾಯಾಮ ಮತ್ತು ಸ್ವಚ್ಛತೆ ಅಗತ್ಯವೆಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದೆ.

ಪುಟ 63ರಲ್ಲಿ ‘ಸಮತೋಲಿತ ಆಹಾರ’ ಎಂಬ ಪ್ರತ್ಯೇಕ ಶೀರ್ಷಿಕೆಯಡಿ ಹಾಲು, ಹಸಿರು ಸೊಪ್ಪುಗಳು, ತರಕಾರಿಗಳು, ಹಣ್ಣುಗಳು ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ದೈನಂದಿನ ಆಹಾರದ ಭಾಗವಾಗಿರಬೇಕು ಎಂದು ವಿವರಿಸಲಾಗಿದೆ. ಅಲ್ಲದೆ, ನೀಡಲಾದ ಚಿತ್ರಣಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ವಿಧದ ಆಹಾರ ಪದಾರ್ಥಗಳನ್ನು ಒಳಗೊಂಡಿರುವುದನ್ನು ಎನ್ಸಿಇಆರ್ಟಿ ಉಲ್ಲೇಖಿಸಿದೆ.

ಇದೇ ವೇಳೆ, ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಆರೋಗ್ಯಕರ ಆಹಾರ ಪದ್ಧತಿಗಳ ಉದಾಹರಣೆಗಳನ್ನು ಪಾಠದಲ್ಲಿ ಸೇರಿಸಲಾಗಿದ್ದು, ಭಾರತದ ಆಹಾರ ವೈವಿಧ್ಯತೆಯ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.

ಪಠ್ಯಪುಸ್ತಕದಲ್ಲಿ ಎಲ್ಲಿಯೂ ಸಸ್ಯಾಹಾರವನ್ನು ಸಮರ್ಥಿಸಲಾಗಿಲ್ಲ ಅಥವಾ ಮಾಂಸಾಹಾರವನ್ನು ವಿರೋಧಿಸಲಾಗಿಲ್ಲ. ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸುವುದೇ ಅಧ್ಯಾಯದ ಮುಖ್ಯ ಉದ್ದೇಶವಾಗಿದೆ ಎಂದು ಎನ್ಸಿಇಆರ್ಟಿ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಾಮಗ್ರಿಗಳನ್ನು ಒದಗಿಸುವ ಬದ್ಧತೆಯನ್ನು ಪುನರುಚ್ಚರಿಸಿರುವ ಎನ್ಸಿಇಆರ್ಟಿ, ಪಠ್ಯಪುಸ್ತಕಗಳ ಸುಧಾರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ಶಿಕ್ಷಣ ಕ್ಷೇತ್ರದ ವಿವಿಧ ಹಿತಾಸಕ್ತಿಪಕ್ಷಗಳಿಂದ ಬರುವ ಸಲಹೆಗಳು ಹಾಗೂ ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುವುದಾಗಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande