

ನವದೆಹಲಿ, 21 ಜೂನ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳದ ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಭಾನುವಾರ ನಡೆದ ಭವ್ಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ನೌಕಾಪಡೆಗೆ ಮೂರು ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆಗಳಾದ ಐಎನ್ಎಸ್ ಅಗ್ರಯ, ಐಎನ್ಎಸ್ ದೂನಾಗಿರಿ ಹಾಗೂ ಐಎನ್ಎಸ್ ಸಂಶೋಧಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ನೌಕಾಪಡೆಯ ಮುಖ್ಯಸ್ಥರು ಹಾಗೂ ಹಿರಿಯ ಸೇನಾ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಯುದ್ಧನೌಕೆಗಳನ್ನು ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಿದರು. ಈ ಸಂದರ್ಭದಲ್ಲಿ ನೌಕಾಪಡೆ ಸಿಬ್ಬಂದಿ, ವಿಜ್ಞಾನಿಗಳು, ಇಂಜಿನಿಯರ್ಗಳು ಹಾಗೂ ಕಾರ್ಮಿಕರನ್ನು ಅಭಿನಂದಿಸಿದ ಅವರು, ಸಮುದ್ರ ಸಾಮರ್ಥ್ಯವಿಲ್ಲದೆ ಯಾವುದೇ ರಾಷ್ಟ್ರ ಜಾಗತಿಕ ಶಕ್ತಿಯಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂದು ವಿಶ್ವದ ಬಹುತೇಕ ವ್ಯಾಪಾರ ಸಮುದ್ರ ಮಾರ್ಗಗಳ ಮೂಲಕ ನಡೆಯುತ್ತಿದ್ದು, ಜಗತ್ತನ್ನು ಸಂಪರ್ಕಿಸುವ ಬೃಹತ್ ದತ್ತಾಂಶ ಜಾಲಗಳೂ ಸಮುದ್ರದ ಅಡಿಯಲ್ಲಿ ಹಾದು ಹೋಗುತ್ತಿವೆ. ಭವಿಷ್ಯದಲ್ಲಿ ಅಗತ್ಯ ಖನಿಜ ಸಂಪನ್ಮೂಲಗಳು, ಆಳ ಸಮುದ್ರದ ಸಂಪತ್ತು ಮತ್ತು ಹೊಸ ಇಂಧನ ಮೂಲಗಳೂ ಸಮುದ್ರಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಭಾರತದ ಸಮುದ್ರ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದು ಅಗತ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೂರು ಯುದ್ಧನೌಕೆಗಳು ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗುವ ಸಂದರ್ಭದಲ್ಲಿ ಸಾಂಪ್ರದಾಯಿಕ ಬಿಗುಲ್ ನಾದದೊಂದಿಗೆ ರಾಷ್ಟ್ರಧ್ವಜ ಹಾಗೂ ನೌಕಾಪಡೆಯ ಧ್ವಜವನ್ನು ಹಾರಿಸಲಾಯಿತು. ವಿಶ್ವ ಜಲಸಮೀಕ್ಷಾ ದಿನದ ಅಂಗವಾಗಿ ದೇಶದ ಅತ್ಯಾಧುನಿಕ ಜಲಸಮೀಕ್ಷಾ ನೌಕೆಯಾದ ಐಎನ್ಎಸ್ ಸಂಶೋಧಕವನ್ನು ನೌಕಾಪಡೆಗೆ ಸೇರಿಸಲಾಯಿತು. ಪ್ರಧಾನಿ ಮೋದಿ ಅವರು ನೌಕೆಗಳನ್ನು ಪರಿಶೀಲಿಸಿ, ಅವುಗಳಲ್ಲಿ ಕರ್ತವ್ಯ ನಿರ್ವಹಿಸಲಿರುವ ಸಿಬ್ಬಂದಿಯನ್ನು ಭೇಟಿ ಮಾಡಿ ಶುಭ ಹಾರೈಸಿದರು.
ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಯ ಮಹತ್ವವನ್ನು ಒತ್ತಿಹೇಳಿದ ಪ್ರಧಾನಿ, ಭಾರತ ಕೇವಲ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವ ರಾಷ್ಟ್ರವಾಗಿರದೆ, ಪ್ರಮುಖ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ನೌಕಾಪಡೆ 40ಕ್ಕೂ ಹೆಚ್ಚು ಸ್ವದೇಶಿ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳನ್ನು ತನ್ನ ಪಡೆಯೊಳಗೆ ಸೇರಿಸಿಕೊಂಡಿದೆ ಎಂದು ಅವರು ತಿಳಿಸಿದರು.
2014ರಲ್ಲಿ ದೇಶದ ರಕ್ಷಣಾ ಉತ್ಪಾದನೆಯ ಮೌಲ್ಯ ಸುಮಾರು 40 ಸಾವಿರ ಕೋಟಿ ರೂಪಾಯಿಗಳಷ್ಟಿದ್ದರೆ, ಅದು ಈಗ 1.8 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ರಕ್ಷಣಾ ರಫ್ತು 700 ಕೋಟಿ ರೂಪಾಯಿಗಳಿಂದ ಸುಮಾರು 40 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಳಗೊಂಡಿದ್ದು, ಭಾರತದ ರಕ್ಷಣಾ ಉತ್ಪನ್ನಗಳು ಇಂದು ಸುಮಾರು 80 ರಾಷ್ಟ್ರಗಳಿಗೆ ರಫ್ತಾಗುತ್ತಿವೆ ಎಂದು ಪ್ರಧಾನಿ ಹೇಳಿದರು.
ಭಾರತ ಈಗ ಸಮುದ್ರ ಶಕ್ತಿಯ ಮುಂದಿನ ಹಂತದತ್ತ ಸಾಗಬೇಕಾದ ಸಮಯ ಬಂದಿದೆ. ಇದಕ್ಕಾಗಿ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಹೊಸ ದೃಷ್ಟಿಕೋನದೊಂದಿಗೆ ದೇಶ ಮುಂದುವರಿಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹಲವು ನೀತಿಗತ ಸುಧಾರಣೆಗಳನ್ನು ಜಾರಿಗೊಳಿಸಲಾಗಿದ್ದು, ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಡಗು ನಿರ್ಮಾಣ, ಹಡಗು ದುರಸ್ತಿ ಹಾಗೂ ನಿರ್ವಹಣೆಯನ್ನು ರಾಷ್ಟ್ರೀಯ ಮಟ್ಟದ ಮಹತ್ವದ ಯೋಜನೆಯಾಗಿ ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ದೇಶದ ಮೊದಲ ಕೈಗಾರಿಕಾ ಸಚಿವರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹೆಸರಿನ ಈ ಬಂದರು, ಭಾರತದ ಹೊಸ ಸಮುದ್ರ ಯುಗದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಹೇಳಿದರು. ಬಂದರುಗಳು, ಕೈಗಾರಿಕೆಗಳು, ಕೌಶಲ್ಯಯುತ ಮಾನವ ಸಂಪನ್ಮೂಲ ಮತ್ತು ಪ್ರತಿಭೆಗಳ ಅಪಾರ ಸಾಮರ್ಥ್ಯ ಹೊಂದಿರುವ ಪಶ್ಚಿಮ ಬಂಗಾಳ ಮುಂದಿನ ದಿನಗಳಲ್ಲಿ ನೀಲಿ ಆರ್ಥಿಕತೆ, ಸಾಗರೋದ್ಯಮ, ಲಾಜಿಸ್ಟಿಕ್ಸ್ ಮತ್ತು ಕರಾವಳಿ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಮೂರು ಯುದ್ಧನೌಕೆಗಳನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ವಿಭಾಗದ ವಿನ್ಯಾಸದ ಆಧಾರದ ಮೇಲೆ ಕೋಲ್ಕತ್ತಾದ ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಇಂಜಿನಿಯರಿಂಗ್ ಸಂಸ್ಥೆ ನಿರ್ಮಿಸಿದೆ. ನೌಕೆಗಳ ನಿರ್ಮಾಣದಲ್ಲಿ ಶೇ.75ಕ್ಕಿಂತ ಹೆಚ್ಚು ಸ್ವದೇಶಿ ವಸ್ತುಗಳನ್ನು ಬಳಸಲಾಗಿದ್ದು, 200ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪಾಲ್ಗೊಂಡಿವೆ.
ಐಎನ್ಎಸ್ ದೂನಾಗಿರಿ 6,670 ಟನ್ ತೂಕ ಮತ್ತು 149 ಮೀಟರ್ ಉದ್ದದ ಅತ್ಯಾಧುನಿಕ ಸ್ಟೆಲ್ತ್ ಫ್ರಿಗೇಟ್ ಆಗಿದ್ದು, ಬ್ರಹ್ಮೋಸ್ ಕ್ಷಿಪಣಿಗಳು ಹಾಗೂ ಮಧ್ಯಮ ವ್ಯಾಪ್ತಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ.
ಐಎನ್ಎಸ್ ಅಗ್ರಯ ಅರ್ನಾಲಾ ವರ್ಗದ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಯಾಗಿದ್ದು, 77 ಮೀಟರ್ ಉದ್ದವಿದೆ. ಆಳ ಕಡಿಮೆ ಇರುವ ಸಮುದ್ರ ಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯ ಇದಕ್ಕಿದೆ.
ಐಎನ್ಎಸ್ ಸಂಶೋಧಕ 3,400 ಟನ್ ತೂಕದ ಅತ್ಯಾಧುನಿಕ ಜಲಸಮೀಕ್ಷಾ ನೌಕೆಯಾಗಿದ್ದು, ಸಮುದ್ರ ಸಮೀಕ್ಷೆ, ಸಮುದ್ರ ನಕ್ಷೆ ರಚನೆ ಮತ್ತು ವೈಜ್ಞಾನಿಕ ಮಾಹಿತಿಯ ಸಂಗ್ರಹಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದು ಅತ್ಯಾಧುನಿಕ ಜಲಾಂತರ್ಗಾಮಿ ಹಾಗೂ ದೂರ ನಿಯಂತ್ರಿತ ಸಮೀಕ್ಷಾ ವ್ಯವಸ್ಥೆಗಳನ್ನು ಹೊಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.