
ಪಾಟ್ನಾ, 21 ಜೂನ್ (ಹಿ.ಸ.) :
ಆ್ಯಂಕರ್ : ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಒಂದು ಕತ್ತಲೆಯ ಅಧ್ಯಾಯವಾಗಿ ದಾಖಲಾಗಿದ್ದರೂ, ದೇಶದ ಪ್ರಜಾಸತ್ತಾತ್ಮಕ ಚೇತನವು ಪ್ರತಿಯೊಂದು ಸಂಕಷ್ಟವನ್ನೂ ಮೀರಿ ವಿಜಯಶಾಲಿಯಾಗಿದೆ. ಈ ಐತಿಹಾಸಿಕ ಹೋರಾಟ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ರಾಷ್ಟ್ರೀಯ ಜಾಗೃತಿಯ ಸ್ಮರಣಾರ್ಥ ದೇಶದ ಮೊದಲ ಬಹುಭಾಷಾ ಸುದ್ದಿ ಸಂಸ್ಥೆಯಾದ ಹಿಂದೂಸ್ಥಾನ ಸಮಾಚಾರ ಜೂನ್ 24ರಂದು ಪಾಟ್ನಾದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ.
ಪಾಟ್ನಾದ ಮಿಠಾಪುರ ಇನ್ಸ್ಟಿಟ್ಯೂಷನಲ್ ಏರಿಯಾದಲ್ಲಿರುವ ಚಂದ್ರಗುಪ್ತ ನಿರ್ವಹಣಾ ಸಂಸ್ಥೆಯಲ್ಲಿ ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದ ವಿಷಯ ‘ತುರ್ತು ಪರಿಸ್ಥಿತಿ 50 ವರ್ಷಗಳು : ಬಿಹಾರ ಚಳವಳಿ ಮತ್ತು ತುರ್ತು ಪರಿಸ್ಥಿತಿ’ ಆಗಿದೆ.
ವಿಚಾರ ಸಂಕಿರಣದ ಮುಖ್ಯ ಭಾಷಣಕಾರರಾಗಿ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಅಧ್ಯಕ್ಷ ಹಾಗೂ ಹಿಂದೂಸ್ಥಾನ ಸಮಾಚಾರದ ಸಮೂಹ ಸಂಪಾದಕರಾದ ರಾಮಬಹಾದುರ್ ರೈ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂಸ್ಥಾನ ಸಮಾಚಾರ ಸಮೂಹದ ಅಧ್ಯಕ್ಷ ಅರವಿಂದ ಭಾಲಚಂದ್ರ ಮಾರ್ಡೀಕರ್ ವಹಿಸಲಿದ್ದಾರೆ.
ಬಿಹಾರ ಸರ್ಕಾರದ ಕಲೆ, ಸಂಸ್ಕೃತಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಡಾ. ಪ್ರಮೋದ್ ಕುಮಾರ್ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಚಂದ್ರಗುಪ್ತ ನಿರ್ವಹಣಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಹಾಗೂ ನಿರ್ದೇಶಕ ಡಾ. ಕುಮುದ್ ಕುಮಾರ್ ಸ್ವಾಗತಾಧ್ಯಕ್ಷರಾಗಿರುತ್ತಾರೆ. ಮಾಜಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಹಾಗೂ ಹಿರಿಯ ಅಂಕಣಕಾರ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಹರೇಂದ್ರ ಪ್ರತಾಪ್ ಅವರು ಆಪತ್ಕಾಲ, ಪತ್ರಿಕಾ ಸ್ವಾತಂತ್ರ್ಯ ಮತ್ತು ಬಿಹಾರ ಚಳವಳಿಯ ವಿವಿಧ ಆಯಾಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ವಿಚಾರ ಸಂಕಿರಣವು ತುರ್ತು ಪರಿಸ್ಥಿತಿ ಕರಾಳ ನೆನಪುಗಳನ್ನು ಮಾತ್ರವಲ್ಲದೆ, ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರಿಯುವ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಸ ತಲೆಮಾರಿಗೆ ತಿಳಿಸುವ ಉದ್ದೇಶ ಹೊಂದಿದೆ ಎಂದು ಡಾ.ರಾಜೇಶ ತಿವಾರಿ ಹೇಳಿದ್ದಾರೆ.
1975ರ ಜೂನ್ 25ರ ರಾತ್ರಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು, ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ಕಠಿಣ ಪರೀಕ್ಷೆಯಾಗಿ ಅದು ಪರಿಗಣಿಸಲ್ಪಟ್ಟಿದೆ. ಪತ್ರಿಕೆಗಳ ಮೇಲೆ ಸೆನ್ಸಾರ್ ಹೇರಿಕೆ, ವಿರೋಧ ಪಕ್ಷದ ನಾಯಕರ ಬಂಧನ ಹಾಗೂ ನಾಗರಿಕ ಹಕ್ಕುಗಳ ಮೇಲಿನ ನಿರ್ಬಂಧಗಳು ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳಿಗೆ ಸವಾಲಾಗಿದ್ದವು.
ಈ ವರ್ಷ ತುರ್ತು ಪರಿಸ್ಥಿತಿ ಘೋಷಣೆಗೆ 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ, ಬಿಹಾರ ಚಳವಳಿ, ತುರ್ತು ಪರಿಸ್ಥಿತಿ ಮತ್ತು ರಾಷ್ಟ್ರ ನಿರ್ಮಾಣದ ವಿವಿಧ ಆಯಾಮಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಪತ್ರಿಕೋದ್ಯಮ ಹಾಗೂ ಸಾಮಾಜಿಕ ಚಳವಳಿಗಳೊಂದಿಗೆ ಸಂಬಂಧ ಹೊಂದಿರುವ ಅನೇಕ ಹಿರಿಯ ವ್ಯಕ್ತಿಗಳು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಡಾ.ರಾಜೇಶ ತಿವಾರಿ ನೀಡಿರುವ ಮಾಹಿತಿ ಪ್ರಕಾರ, ಪ್ರಾಚೀನ ಪಾಟಲಿಪುತ್ರವು ಭಾರತದ ರಾಜಕೀಯ, ಸಾಂಸ್ಕೃತಿಕ ಮತ್ತು ವೈಚಾರಿಕ ಜಾಗೃತಿಯ ಕೇಂದ್ರವಾಗಿತ್ತು. ಇದೇ ನೆಲ ಚಂದ್ರಗುಪ್ತ ಮೌರ್ಯರ ರಾಷ್ಟ್ರ ನಿರ್ಮಾಣಕ್ಕೆ ಸಾಕ್ಷಿಯಾಗಿದ್ದು, ಸಮ್ರಾಟ್ ಅಶೋಕನ ಜನಪರ ಆಡಳಿತವನ್ನು ಕಂಡಿದೆ. ಸ್ವಾತಂತ್ರ್ಯ ಹೋರಾಟದ ಪ್ರಮುಖ ಹಂತಗಳಿಗೆ ಸಾಕ್ಷಿಯಾದ ಈ ನೆಲ, ನಂತರ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆದ ಜನಾಂದೋಲನದ ಕೇಂದ್ರವಾಗಿಯೂ ಹೊರಹೊಮ್ಮಿತು.
1974ರಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಬಿಹಾರದಿಂದ ಆರಂಭವಾದ ಚಳವಳಿ ಕೇವಲ ರಾಜಕೀಯ ಬದಲಾವಣೆಯ ಹೋರಾಟವಾಗಿರಲಿಲ್ಲ. ಅದು ರಾಷ್ಟ್ರಜೀವನದಲ್ಲಿ ಜಾಗೃತಗೊಂಡ ಜನಶಕ್ತಿಯ ಪ್ರತೀಕವಾಗಿತ್ತು. ಅದರ ಒಂದು ವರ್ಷದ ಬಳಿಕ ಜಾರಿಗೊಂಡ ಆಪತ್ಕಾಲವು ಸ್ವಾತಂತ್ರ್ಯವೆಂದರೆ ಕೇವಲ ವಿದೇಶಿ ಆಳ್ವಿಕೆಯಿಂದ ಮುಕ್ತಿಯಾಗುವುದಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯಗಳ ರಕ್ಷಣೆಯೂ ಅದರ ಅವಿಭಾಜ್ಯ ಅಂಗಗಳಾಗಿವೆ ಎಂಬುದನ್ನು ದೇಶಕ್ಕೆ ಮನವರಿಕೆ ಮಾಡಿಕೊಟ್ಟಿತು.
ಇಂದಿನ ಯುವ ಪೀಳಿಗೆ ಬ್ರಿಟಿಷರ ಆಳ್ವಿಕೆಯನ್ನೂ ಕಂಡಿಲ್ಲ, ತುರ್ತು ಪರಿಸ್ಥಿತಿ ಅನುಭವವನ್ನೂ ಹೊಂದಿಲ್ಲ. ಆದ್ದರಿಂದ ಇತಿಹಾಸದ ಈ ಮಹತ್ವದ ಅಧ್ಯಾಯಗಳನ್ನು ಅವರಿಗೆ ಪರಿಚಯಿಸುವುದು ಕಾಲದ ಅಗತ್ಯವಾಗಿದೆ ಎಂದು ಡಾ.ರಾಜೇಶ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.