
ಕೊಪ್ಪಳ, 20 ಜೂನ್ (ಹಿ.ಸ.) :
ಆ್ಯಂಕರ್ : ಗಂಗಾವತಿ ನಗರದ ಹಿರೇಜಂತಕಲ್ ಮೂರನೇ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಾಥಮಿಕ ಶಾಲೆಗೆ ಪ್ರವೇಶಿಸಿದ ಮಕ್ಕಳಿಗೆ ಬೀಳ್ಕೊಡುಗೆ ಮತ್ತು ಘಟಿಕೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ಹಮ್ಮಿಕೊಳ್ಳಲಾಯಿತು.
ಮಕ್ಕಳು ಅಂಗನವಾಡಿಯಲ್ಲಿ ಮೂರು ವರ್ಷಗಳ ಕಾಲ ಶಾಲಾ ಪೂರ್ವ ಶಿಕ್ಷಣವನ್ನು ಕಲಿತ ವಿಷಯಗಳ ಕುರಿತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು, ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತರ ಮಾಹಿತಿ, ವಿವಿಧ ಕರೆನ್ಸಿ ನೋಟುಗಳ ಕುರಿತು, ವೃತ್ತಿಗಳ ಕುರಿತು, ಹವಾಮಾನ ಬದಲಾವಣೆ ಕುರಿತು, ಪರಿಸರ ಕಾಳಜಿಯ ಕುರಿತು ಇನ್ನು ಅನೇಕ ವಿಷಯಗಳ ಕುರಿತು ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನದಲ್ಲಿ ಒಂದೊಂದು ವಿಷಯದ ಕುರಿತು ಸ್ವತಃ ಮಕ್ಕಳೇ ಚಿತ್ರ ತೋರಿಸುತ್ತಾ ತನ್ನ ತೊದಲು ನುಡಿಯಲ್ಲಿ ವಿವರಣೆ ಕೊಡುತ್ತಿರುವದು ಅದ್ಭುತವಾಗಿತ್ತು. ಮಕ್ಕಳ ವಿವರಣೆ, ಪ್ರತಿಭೆಯನ್ನು ಕಂಡು ಹಾಜರಿದ್ದ ಅಧಿಕಾರಿಗಳು, ಪೋಷಕರು ತುಂಬಾ ಸಂತೋಷ ಪಟ್ಟರು.
ನಂತರ ನಡೆದ ಘಟಿಕೋತ್ಸವ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಅಮರೇಶ್ ಹಾವಿನ್ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಉಪನಿರ್ದೇಶಕರಾದ ಗಂಗಪ್ಪ ಅವರು ಉಪಸ್ಥಿತರಿದ್ದರು.
ಮಕ್ಕಳಿಗೆ ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವ ಮಾದರಿಯಲ್ಲಿ ಪದವಿ ಪ್ರಧಾನ ಮಾಡಿರುವದು ವಿನೂತನವಾಗಿತ್ತು, ಘಟಿಕೋತ್ಸವದ ಉಡುಗೆಯಲ್ಲಿ ಪ್ರಮಾಣ ಪತ್ರವನ್ನು ಸ್ವೀಕರಿಸಿದ ಮಕ್ಕಳನ್ನು ಕಂಡು ಪೋಷಕರು ತುಂಬಾ ಸಂತೋಷ ಪಟ್ಟರು.
ಇಂತಹ ಒಂದು ವಿನೂತನ ಕಾರ್ಯಕ್ರಮ ನಡೆಯಲು ಕಾರಣರಾದ ಕೇಂದ್ರದ ಕಾರ್ಯಕರ್ತರಾದ ಸುನೀತಾ ಅವರನ್ನು ಉಪನಿರ್ದೇಶಕರಾದ ಅಮರೇಶ್ ಅವರು ಅಭಿನಂದಿಸಿದರು. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಈ ರೀತಿಯಾಗಿ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳು ನಿರಂತರವಾಗಿ, ಪರಿಣಾಮಕಾರಿಯಾಗಿ ನಡೆದಲ್ಲಿ ಅಂಗನವಾಡಿಯ ಕಡೆ ಪೋಷಕರು ಮಕ್ಕಳನ್ನು ದಾಖಲಿಸಲು ಮುಂದಾಗುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಓ ಶರಣಪ್ಪ ಗದ್ದಿ, ಶಾಲಾ ಮುಖ್ಯ ಶಿಕ್ಷಕರು, ಕಲಿಕೆ ಟ್ರಸ್ಟ್ ವ್ಯವಸ್ಥಾಪಕ ಅಶೋಕ, ಸಿದ್ದಪ್ಪ ಕುರಿ, ಮೇಲ್ವಿಚಾರಕರಾದ ವಿದ್ಯಾವತಿ, ಶರಣಮ್ಮ, ಈರಮ್ಮ, ಅಂಗನವಾಡಿ ಶಿಕ್ಷಕರು, ಸಹಾಯಕಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್