ಮುಂಗಾರು ದುರ್ಬಲ ; ಸಿರಿಧಾನ್ಯಗಳ ಬೆಳೆಯಲು ರೈತರಿಗೆ ಕೃಷಿ ಇಲಾಖೆ ಸಲಹೆ
ಕೊಪ್ಪಳ, 20 ಜೂನ್ (ಹಿ.ಸ.) : ಆ್ಯಂಕರ್ : ಪ್ರಸಕ್ತ ಮುಂಗಾರು ದುರ್ಬಲ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಬೆಳೆಯಲು ಜಿಲ್ಲೆಯ ರೈತರಿಗೆ ಕೊಪ್ಪಳ ಕೃಷಿ ಇಲಾಖೆಯ ವತಿಯಿಂದ ಸಲಹೆಗಳನ್ನು ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ವರ್ಷವು ಸಾಮಾನ್ಯಕ್ಕಿಂತ ಕಡಿಮೆ ಮಳೆ ಆಗುವ ಸಾಧ್ಯತೆಯಿದೆ
ಮುಂಗಾರು ದುರ್ಬಲ ; ಸಿರಿಧಾನ್ಯಗಳ ಬೆಳೆಯಲು ರೈತರಿಗೆ ಕೃಷಿ ಇಲಾಖೆ ಸಲಹೆ


ಕೊಪ್ಪಳ, 20 ಜೂನ್ (ಹಿ.ಸ.) :

ಆ್ಯಂಕರ್ : ಪ್ರಸಕ್ತ ಮುಂಗಾರು ದುರ್ಬಲ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಬೆಳೆಯಲು ಜಿಲ್ಲೆಯ ರೈತರಿಗೆ ಕೊಪ್ಪಳ ಕೃಷಿ ಇಲಾಖೆಯ ವತಿಯಿಂದ ಸಲಹೆಗಳನ್ನು ನೀಡಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ವರ್ಷವು ಸಾಮಾನ್ಯಕ್ಕಿಂತ ಕಡಿಮೆ ಮಳೆ ಆಗುವ ಸಾಧ್ಯತೆಯಿದೆ. ಈ ಬಾರಿ ಮುಂಗಾರಿನ ಮೇಲೆ ಎಲ್ ನೀನೋ (ಎಲ್ ನೀನೋ ಎಂದರೆ ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗದಲ್ಲಿ ಸಮುದ್ರ ಮೇಲ್ಮೈ ನೀರಿನ ತಾಪಮಾನ ಅಸಾಮಾನ್ಯವಾಗಿ ಹೆಚ್ಚಾಗುವ ಒಂದು ಪ್ರಕೃತಿ ಘಟನೆ. ಸಾಮಾನ್ಯವಾಗಿ ಪೆಸಿಫಿಕ್ ಮಹಾಸಾಗರದಲ್ಲಿ ಗಾಳಿ ಅಥವಾ ಮಾರುತಗಳು ಪೂರ್ವದಿಂದ ಪಶ್ಚಿಮಕ್ಕೆ ಬೀಸುತ್ತವೆ.

ಆದರೆ ಎಲ್ ನೀನೋ ಸಮಯದಲ್ಲಿ ಈ ಗಾಳಿ ದುರ್ಬಲವಾಗುತ್ತವೆ ಅಥವಾ ಬದಲಾಗುತ್ತವೆ. ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ಬೀಸುತ್ತವೆ. ಇದರಿಂದ ಸಮುದ್ರದ ಬಿಸಿ ನೀರು ಪೂರ್ವ ಭಾಗಕ್ಕೆ (ಅಮೇರಿಕಾ ಕಡೆಗೆ) ಹರಿದು ಬರುತ್ತದೆ) ಪರಿಣಾಮ ಇರುವುದರಿಂದ ಕರ್ನಾಟಕದಲ್ಲಿ ಸರಾಸರಿ ವಾರ್ಷಿಕ ವಾಡಿಕೆ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ.

ಆದ್ದರಿಂದ, ಕೊಪ್ಪಳ ಜಿಲ್ಲೆಯ ರೈತರು ಉತ್ತಮ ಮಳೆಯಾಗುವವರಿಗೂ ಅಥವಾ ಮಣ್ಣಿನಲ್ಲಿ ಉತ್ತಮ ತೇವಾಂಶವಿದ್ದಾಗ ಬಿತ್ತನೆ ಮಾಡಬೇಕು. ಪ್ರಸ್ತುತ ಮಣ್ಣಿನಲ್ಲಿ ತೇವಾಂಶ ಸಾಕಷ್ಟು ಕಡಿಮೆಯಿದ್ದು, ಕಡಿಮೆ ಅವಧಿಯ ಬರ ನಿರೋಧಕ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿತ್ತನೆ ಸಮಯದಲ್ಲಿ ಕ್ಯಾಲ್ಸಿಯಂ ಕ್ಲೋರೈಡ್ದಿಂದ ಬೀಜೋಪಚಾರ ಮಾಡಬೇಕು.

ಹಾಗೂ ಬರ ನಿರೋಧಕ ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಬರಗು, ಊದಲೂ ಮುಂತಾದವುಗಳನ್ನು ಬೆಳೆಯಲು ನಮ್ಮ ಕೊಪ್ಪಳ ಜಿಲ್ಲೆಯ ರೈತರು ಹೆಚ್ಚಿನ ಆಸಕ್ತಿ ವಹಿಸಿಕೊಳ್ಳಬೇಕು. ಈಗಾಗಲೇ ಬಿತ್ತನೆ ಮಾಡಿದ ರೈತರು ಆಗಾಗೆ ಎಡೆಕುಂಟೆ ಹೊಡೆದು ಮಣ್ಣಿನ ತೇವಾಂಶ ಕಾಪಾಡಿಕೊಳ್ಳಬೇಕು ಹಾಗೂ ನೀರಿನ ಲಭ್ಯವಿದ್ದಲ್ಲಿ ನೀರನ್ನು ತುಂತುರು ಅಥವಾ ಹನಿ ನೀರಾವರಿ ಮುಖಾಂತರ ಒದಗಿಸಬೇಕು.

ರೈತರು ಕಡ್ಡಾಯವಾಗಿ ಅನುಸರಿಸಬೇಕಾದ ಬೆಳೆ ನಿರ್ವಹಣಾ ಕ್ರಮಗಳು: ಹೊಲದಲ್ಲಿಯೇ ತೇವಾಂಶ ಸಂರಕ್ಷಣೆ ಕ್ರಮಗಳನ್ನು ಅನುಸರಿಸಬೇಕು. ಇದರಲಿ ಮಣ್ಣು ಮತ್ತು ಭೂ ನಿರ್ವಹಣಾ ಪದ್ಧತಿಗಳಾದ ಹೊಲದ ಬದು ನಿರ್ಮಾಣ ವಿಭಾಗೀಯ ಬದು ನಿರ್ಮಾಣ ಮೇಡು ಮತ್ತು ಕಾಲುವೆಗಳು , ಸಂರಕ್ಷಣಾ ಕಾಲುವೆಗಳು , ಅಗಲವಾದ ಮಂಚ ಮತ್ತು ಕಾಲುವೆ ಪದ್ಧತಿ , ವಿಶೇಷವಾಗಿ ಕೆಂಪು ಮಣ್ಣಿನ ಪ್ರದೇಶಗಳಲ್ಲಿ ನೆಲಗಡಲೆ ಹಾಗೂ ನೆಲಗಡಲೆ + ತೊಗರಿ ಅಂತರ ಬೆಳೆಗಳಲ್ಲಿ ಬಿತ್ತನೆಯ ನಂತರ 30ನೇ ದಿನದಲ್ಲಿ ಡೆಡ್ ಫರೋ ನಿರ್ಮಾಣ, ಮಲ್ಚಿಂಗ್ ಮುಂತಾದ ಕ್ರಮಗಳನ್ನು ಅನುಸರಿಸಬೇಕು.

ಕಳೆ ನಿಯಂತ್ರಣ ಹಾಗೂ ತೇವಾಂಶ ಸಂರಕ್ಷಣೆಗಾಗಿ ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮುಗಳಲ್ಲಿ ಆಗಾಗ್ಗೆ ಅಂತರ ಬೇಸಾಯ ಕೈಗೊಳ್ಳಬೇಕು. ಹತ್ತಿ ಮತ್ತು ನೆಲಗಡಲೆ ಮುಂತಾದ ಬೆಳೆಗಳನ್ನು, ವಿಶೇಷವಾಗಿ ಆಳ ಕಡಿಮೆ ಇರುವ ಮಣ್ಣಿನಲ್ಲಿ, ಒಣ ಬಿತ್ತನೆ ಮಾಡಬಾರದು. ಮಣ್ಣಿನ ಬೇರು ವಲಯದಲ್ಲಿ ಸಾಕಷ್ಟು ತೇವಾಂಶ ಲಭ್ಯವಿರುವಾಗ ಮಾತ್ರ ಬಿತ್ತನೆ ಮಾಡಬೇಕು. 2 ರಿಂದ 3 ದಿನಗಳ ಅವಧಿಯಲ್ಲಿ ಕನಿಷ್ಠ 50 ರಿಂದ 60 ಮಿ.ಮೀ. ಮಳೆ ಬಂದ ನಂತರ ಮಾತ್ರ ಬಿತ್ತನೆ ಕೈಗೊಳ್ಳಬೇಕು. ಅದಕ್ಕಿಂತ ಮೊದಲು ಬಿತ್ತನೆ ಮಾಡಬಾರದು. ಹವಾಮಾನ ಆಧಾರಿತ ಬೆಳೆ ವಿಮೆ ಸೇರಿದಂತೆ ಲಭ್ಯವಿರುವ ಬೆಳೆ ವಿಮೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು, ಕೊಪ್ಪಳ ಇವರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಐ.ಸಿ.ಆರ್-ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande