ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ ; ಐಐಟಿ ದೆಹಲಿಗೆ 118ನೇ ಸ್ಥಾನ
ನವದೆಹಲಿ, 18 ಜೂನ್ (ಹಿ.ಸ.) : ಆ್ಯಂಕರ್ : ಭಾರತೀಯ ತಾಂತ್ರಿಕ ಸಂಸ್ಥೆ ದೆಹಲಿ (ಐಐಟಿ ದೆಹಲಿ) ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ 118ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷದ 123ನೇ ಸ್ಥಾನಕ್ಕೆ ಹೋಲಿಸಿದರೆ ಐದು ಸ್ಥಾನಗ
ಐಐಟಿ ದೆಹಲಿ


ನವದೆಹಲಿ, 18 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ತಾಂತ್ರಿಕ ಸಂಸ್ಥೆ ದೆಹಲಿ (ಐಐಟಿ ದೆಹಲಿ) ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ 118ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷದ 123ನೇ ಸ್ಥಾನಕ್ಕೆ ಹೋಲಿಸಿದರೆ ಐದು ಸ್ಥಾನಗಳ ಏರಿಕೆ ದಾಖಲಿಸಿರುವ ಐಐಟಿ ದೆಹಲಿ, ದೇಶದ ಅಗ್ರ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಯಾಗಿ ತನ್ನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದೆ.

ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027ರ ಪ್ರಕಾರ, ಐಐಟಿ ದೆಹಲಿ ಭಾರತೀಯ ಸಂಸ್ಥೆಯೊಂದು ಇದುವರೆಗೆ ಸಾಧಿಸಿದ್ದ ಅತ್ಯುನ್ನತ ಜಾಗತಿಕ ಶ್ರೇಯಾಂಕವಾದ 118ನೇ ಸ್ಥಾನವನ್ನು ಸರಿಗಟ್ಟಿದೆ. ವಿವಿಧ ಕಾರ್ಯಕ್ಷಮತಾ ಮಾನದಂಡಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವುದೇ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

ಉದ್ಯೋಗದಾತರ ಪ್ರತಿಷ್ಠೆ ವಿಭಾಗದಲ್ಲಿ ಐಐಟಿ ದೆಹಲಿ 11 ಸ್ಥಾನಗಳ ಏರಿಕೆ ಕಂಡು ಜಾಗತಿಕವಾಗಿ 39ನೇ ಸ್ಥಾನ ಪಡೆದಿದೆ. ವಿಶ್ವದ ಉದ್ಯೋಗದಾತರು ಯಾವ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಹೆಚ್ಚು ಸಿದ್ಧರೆಂದು ಪರಿಗಣಿಸುತ್ತಾರೆ ಎಂಬುದನ್ನು ಈ ಮಾನದಂಡ ಅಳೆಯುತ್ತದೆ.

ಉದ್ಯೋಗ ಫಲಿತಾಂಶಗಳು ವಿಭಾಗದಲ್ಲಿ ಸಂಸ್ಥೆ 60 ಸ್ಥಾನಗಳ ಗಮನಾರ್ಹ ಏರಿಕೆ ಸಾಧಿಸಿದೆ. ಈ ಮಾನದಂಡವು ಪದವೀಧರರ ಉದ್ಯೋಗ ಸಾಮರ್ಥ್ಯ, ವಿವಿಧ ಕ್ಷೇತ್ರಗಳಲ್ಲಿ ಅವರ ನಾಯಕತ್ವ ಹಾಗೂ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.

ಪ್ರತಿ ಅಧ್ಯಾಪಕರಿಗೆ ಉಲ್ಲೇಖಗಳು ವಿಭಾಗದಲ್ಲಿಯೂ ಐಐಟಿ ದೆಹಲಿ 26 ಸ್ಥಾನಗಳ ಸುಧಾರಣೆ ದಾಖಲಿಸಿದೆ. ವಿಶ್ವವಿದ್ಯಾಲಯದ ಸಂಶೋಧನೆಯ ಗುಣಮಟ್ಟ ಮತ್ತು ಅದರ ಜಾಗತಿಕ ಪ್ರಭಾವವನ್ನು ಈ ಮಾನದಂಡದ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.

ಈ ಸಾಧನೆ ಕುರಿತು ಪ್ರತಿಕ್ರಿಯಿಸಿದ ಐಐಟಿ ದೆಹಲಿಯ ಯೋಜನಾ ವಿಭಾಗದ ಡೀನ್ ಹಾಗೂ ಶ್ರೇಯಾಂಕ ಘಟಕದ ಮುಖ್ಯಸ್ಥರಾದ ಪ್ರೊ. ಸೋಮನಾಥ ಬೈದ್ಯ ರಾಯ್, ವಿಶ್ವಮಟ್ಟದ ಹಾಗೂ ಕೈಗೆಟಕುವ ತಾಂತ್ರಿಕ ಶಿಕ್ಷಣ ಒದಗಿಸುವುದರ ಜೊತೆಗೆ ಜಾಗತಿಕ ಸಂಶೋಧಕರಿಗೆ ಆದ್ಯತೆಯ ತಾಣವಾಗುವ ಗುರಿಯತ್ತ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಹೊಸ ಪಠ್ಯಕ್ರಮಗಳು, ಆಧುನಿಕ ಮೂಲಸೌಕರ್ಯ ಹಾಗೂ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಸಹಭಾಗಿತ್ವವು ಮುಂದಿನ ವರ್ಷಗಳಲ್ಲಿ ಸಂಸ್ಥೆಯ ಗುಣಮಟ್ಟ ಮತ್ತು ಪ್ರಭಾವವನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶ್ರೇಯಾಂಕವು ಸಂಸ್ಥೆಯ ಗುರಿಯಲ್ಲ, ಅದು ನಿರಂತರ ಕಾರ್ಯಕ್ಷಮತೆಯ ಫಲಿತಾಂಶ ಎಂದು ಅವರು ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಐಐಟಿ ದೆಹಲಿ ತನ್ನ ಜಾಗತಿಕ ಶ್ರೇಯಾಂಕದಲ್ಲಿ 79 ಸ್ಥಾನಗಳ ಏರಿಕೆ ಸಾಧಿಸಿದೆ. 2024ರಲ್ಲಿ 197ನೇ ಸ್ಥಾನದಲ್ಲಿದ್ದ ಸಂಸ್ಥೆ ಈಗ 118ನೇ ಸ್ಥಾನಕ್ಕೆ ಏರಿಕೆಯಾಗಿದೆ.

ಇದೇ ವೇಳೆ, 2026ರ ಮಾರ್ಚ್ನಲ್ಲಿ ಪ್ರಕಟವಾದ ವಿಷಯವಾರು ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಐಐಟಿ ದೆಹಲಿಯ ಹಲವು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗಗಳು ವಿಶ್ವದ ಅಗ್ರ 50 ವಿಷಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ವಿದ್ಯುತ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಕೆಮಿಕಲ್ ಎಂಜಿನಿಯರಿಂಗ್ ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗಗಳು ಈ ಸಾಧನೆ ಮಾಡಿದ್ದವು.

ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಐಐಟಿ ದೆಹಲಿ ಜಾಗತಿಕ ಮಟ್ಟದಲ್ಲಿ 36ನೇ ಸ್ಥಾನ ಪಡೆದು ದೇಶದ ಅಗ್ರ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ತನ್ನ ಮುನ್ನಡೆಯನ್ನು ಮುಂದುವರಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande