
ನವದೆಹಲಿ, 18 ಜೂನ್ (ಹಿ.ಸ.) :
ಆ್ಯಂಕರ್ : ದೇಶದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಯಂತ್ರ ಇಂಡಿಯಾ ಲಿಮಿಟೆಡ್ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಸ್ಥಾಪಿಸಲಾಗಲಿರುವ 10,000 ಟನ್ ಸಾಮರ್ಥ್ಯದ ಅಲ್ಯೂಮಿನಿಯಂ ಹೊರತೆಗೆಯುವ ಯಂತ್ರ ಯೋಜನೆಗೆ ಜೂನ್ 19ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೂಮಿಪೂಜೆ ನೆರವೇರಿಸಲಿದ್ದಾರೆ.
ರಕ್ಷಣಾ ಸಚಿವಾಲಯದ ಪ್ರಕಟಣೆಯ ಪ್ರಕಾರ, ಈ ಅತ್ಯಾಧುನಿಕ ಯೋಜನೆಯು ದೇಶದ ರಕ್ಷಣಾ ಉತ್ಪಾದನಾ ವಲಯಕ್ಕೆ ಮಹತ್ವದ ರಾಷ್ಟ್ರೀಯ ಆಸ್ತಿಯಾಗಲಿದೆ. ರಕ್ಷಣಾ ಮತ್ತು ವೈಮಾನಿಕ ಬಾಹ್ಯಾಕಾಶ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸಲು ಬೇಕಾಗಿರುವ ದೊಡ್ಡ ಗಾತ್ರದ, ಹೆಚ್ಚಿನ ಸಾಮರ್ಥ್ಯದ ಹಾಗೂ ಅತ್ಯಂತ ನಿಖರವಾದ ಅಲ್ಯೂಮಿನಿಯಂ ಮಿಶ್ರಲೋಹ ಘಟಕಗಳನ್ನು ದೇಶದಲ್ಲೇ ಉತ್ಪಾದಿಸುವ ಸಾಮರ್ಥ್ಯವನ್ನು ಇದು ಹೆಚ್ಚಿಸಲಿದೆ.
ಈ ಯೋಜನೆ ಜಾರಿಯಾದ ನಂತರ ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಪ್ರಮುಖ ಅಲ್ಯೂಮಿನಿಯಂ ಘಟಕಗಳ ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಜೊತೆಗೆ ದೇಶೀಯ ಉತ್ಪಾದನೆಗೆ ಉತ್ತೇಜನ ದೊರೆಯಲಿದ್ದು, ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಸಂಕಲ್ಪಕ್ಕೆ ಮತ್ತಷ್ಟು ಬಲ ಸಿಗಲಿದೆ.
ದೇಶದ ರಕ್ಷಣಾ ಕೈಗಾರಿಕೆಯನ್ನು ತಾಂತ್ರಿಕವಾಗಿ ಸ್ವಾವಲಂಬಿಯನ್ನಾಗಿಸುವುದು, ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವುದು ಹಾಗೂ ಆಧುನಿಕ ರಕ್ಷಣಾ ಉಪಕರಣಗಳ ತಯಾರಿಕೆಗೆ ಅಗತ್ಯವಾದ ಮೂಲಸೌಕರ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.