ಮೋದಿ ಸರ್ಕಾರದ 12 ವರ್ಷಗಳು ಅಭಿವೃದ್ಧಿ ಮತ್ತು ಪರಂಪರೆಯ ಸುವರ್ಣ ಯುಗ : ಅಮಿತ್ ಶಾ
ನವದೆಹಲಿ, 18 ಜೂನ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಆಡಳಿತವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ “ಅಭಿವೃದ್ಧಿ ಮತ್ತು ಪರಂಪರೆಯ ಸುವರ್ಣ ಯುಗ” ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ಅವರು, ಕಳೆದ 12 ವ
ಅಮಿತ್ ಶಾ


ನವದೆಹಲಿ, 18 ಜೂನ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಆಡಳಿತವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ “ಅಭಿವೃದ್ಧಿ ಮತ್ತು ಪರಂಪರೆಯ ಸುವರ್ಣ ಯುಗ” ಎಂದು ಬಣ್ಣಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ಅವರು, ಕಳೆದ 12 ವರ್ಷಗಳಲ್ಲಿ ದೇಶದ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಒಂದಕ್ಕೊಂದು ಪೂರಕವಾಗಿ ಸಾಗಿವೆ ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ಶ್ರೀ ರಾಮ ಮಂದಿರ, ಕಾಶಿ ವಿಶ್ವನಾಥ ಕಾರಿಡಾರ್ ಹಾಗೂ ಮಹಾಕಾಲ್ ಲೋಕ ಮೊದಲಾದ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಯೋಜನೆಗಳು ಸಾಕಾರಗೊಂಡಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಅದರ ಜೊತೆಗೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್, ಆಹಾರ ಸಂಗ್ರಹಣಾ ವ್ಯವಸ್ಥೆಯ ಬಲವರ್ಧನೆ, ವಿಶ್ವದರ್ಜೆಯ ಸಂಪರ್ಕ ಮೂಲಸೌಕರ್ಯ ಹಾಗೂ “ಮೇಕ್ ಇನ್ ಇಂಡಿಯಾ” ಉಪಕ್ರಮಗಳಂತಹ ಕಾರ್ಯಕ್ರಮಗಳು ದೇಶದ ಅಭಿವೃದ್ಧಿಗೆ ಅಭೂತಪೂರ್ವ ವೇಗ ನೀಡಿವೆ ಎಂದು ಶಾ ತಿಳಿಸಿದ್ದಾರೆ.

ಪರಂಪರೆಯ ಸಂರಕ್ಷಣೆ ಕ್ಷೇತ್ರದಲ್ಲಿಯೂ ಮಹತ್ವದ ಸಾಧನೆಗಳು ನಡೆದಿದ್ದು, ಸುಮಾರು ಒಂದು ಕೋಟಿ ಐತಿಹಾಸಿಕ ದಾಖಲೆಗಳ ಡಿಜಿಟಲೀಕರಣ, ವಿದೇಶಗಳಿಂದ 668 ಪ್ರಾಚೀನ ಕಲಾಕೃತಿಗಳ ಮರುಪಡೆಯುವಿಕೆ, 11 ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳ ಸ್ಥಾಪನೆ ಹಾಗೂ 11 ಭಾರತೀಯ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.

ದೇಶದ ಸಮಗ್ರ ಪ್ರಗತಿಯೊಂದಿಗೆ ತನ್ನ ಸಾಂಸ್ಕೃತಿಕ ಬೇರುಗಳನ್ನು ಮತ್ತಷ್ಟು ಬಲಪಡಿಸುವ ಕಾರ್ಯವನ್ನು ಮೋದಿ ಸರ್ಕಾರ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಅಮಿತ್ ಶಾ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande