
ನವದೆಹಲಿ, 17 ಜೂನ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಥೈಲೆಂಡ್ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ವಿಸ್ತರಿಸಿ, ಸಾಮರ್ಥ್ಯ ಅಭಿವೃದ್ಧಿ, ರಕ್ಷಣಾ ಉತ್ಪಾದನೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಬಲಪಡಿಸಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ಜೊತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆ (ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್) ಮಟ್ಟಕ್ಕೆ ಮೇಲ್ದರ್ಜೆಗೇರಿಸಿರುವುದಾಗಿ ತಿಳಿಸಿವೆ.
ಥೈಲೆಂಡ್ನ ರಾಜಧಾನಿ ಬ್ಯಾಂಕಾಕ್ನಲ್ಲಿ ನಡೆದ 10ನೇ ಭಾರತ–ಥೈಲೆಂಡ್ ರಕ್ಷಣಾ ಸಂವಾದದಲ್ಲಿ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರದ ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಈ ವೇಳೆ ಪರಸ್ಪರ ಹಿತಾಸಕ್ತಿಗೆ ಸಂಬಂಧಿಸಿದ ಪ್ರಾದೇಶಿಕ ಹಾಗೂ ಜಾಗತಿಕ ಭದ್ರತಾ ವಿಷಯಗಳ ಕುರಿತು ಉಭಯ ರಾಷ್ಟ್ರಗಳು ಅಭಿಪ್ರಾಯ ವಿನಿಮಯ ನಡೆಸಿದವು.
ಥೈಲೆಂಡ್ ರಕ್ಷಣಾ ಇಲಾಖೆಯ ಉಪ ಸ್ಥಾಯಿ ಕಾರ್ಯದರ್ಶಿ ಅಡ್ಮಿರಲ್ ನಟ್ಟಪೋಲ್ ಡಿಯೆವ್ವಾನಿಚ್ ಹಾಗೂ ಭಾರತದ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಯಜಿತ್ ಮೊಹಂತಿ ಅವರ ಸಹಾಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಹಿಂದೂ ಮಹಾಸಾಗರ–ಪ್ರಶಾಂತ (ಇಂಡೋ-ಪೆಸಿಫಿಕ್) ಪ್ರದೇಶದಲ್ಲಿ ವೇಗವಾಗಿ ಬದಲಾಗುತ್ತಿರುವ ಭದ್ರತಾ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಲಾಯಿತು. ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಉಭಯ ದೇಶಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಪುನರುಚ್ಚರಿಸಿದವು.
ಹಿಂದಿನ ಸಂವಾದದ ಬಳಿಕ ದ್ವಿಪಕ್ಷೀಯ ರಕ್ಷಣಾ ಸಹಕಾರದಲ್ಲಿ ಸಾಧಿಸಿರುವ ಪ್ರಗತಿಯನ್ನು ನಿಯೋಗಗಳು ಪರಿಶೀಲಿಸಿದವು. ಪ್ರಸ್ತುತ ನಡೆಯುತ್ತಿರುವ ಸೇನಾ ಸಮನ್ವಯ, ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು, ತರಬೇತಿ ವಿನಿಮಯ, ಸಮುದ್ರ ಭದ್ರತಾ ಸಹಕಾರ ಹಾಗೂ ಪರಸ್ಪರ ಹಿತಾಸಕ್ತಿಯ ಇತರ ಕ್ಷೇತ್ರಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಉಭಯ ದೇಶಗಳ ನಡುವೆ ನಡೆಯುತ್ತಿರುವ ರಕ್ಷಣಾ ಕೈಗಾರಿಕಾ ಸಹಕಾರದ ಪ್ರಗತಿಯನ್ನೂ ಸಭೆಯಲ್ಲಿ ಅವಲೋಕಿಸಲಾಯಿತು. ರಕ್ಷಣಾ ಉತ್ಪಾದನೆ, ಸಂಶೋಧನೆ, ತಂತ್ರಜ್ಞಾನ ಆವಿಷ್ಕಾರ ಮತ್ತು ಸಾಮರ್ಥ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಅವಕಾಶಗಳ ಕುರಿತು ಚರ್ಚಿಸಲಾಯಿತು.
ಇದೇ ವೇಳೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್) ನೇತೃತ್ವದ ಪ್ರಾದೇಶಿಕ ಮತ್ತು ಬಹುಪಕ್ಷೀಯ ರಕ್ಷಣಾ ವೇದಿಕೆಗಳ ಅಡಿಯಲ್ಲಿ ಸಹಕಾರ ವೃದ್ಧಿಸುವ ಬಗ್ಗೆ ಅಭಿಪ್ರಾಯ ವಿನಿಮಯ ನಡೆಯಿತು. ಸಂವಾದ ಮತ್ತು ಸಹಕಾರದ ಮೂಲಕ ಸಾಮಾನ್ಯ ಭದ್ರತಾ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ಉಭಯ ದೇಶಗಳು ಪುನರುಚ್ಚರಿಸಿದವು.
ಸಭೆಯ ಅಂತ್ಯದಲ್ಲಿ ಭವಿಷ್ಯದ ಜಂಟಿ ಚಟುವಟಿಕೆಗಳು ಹಾಗೂ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಕುರಿತು ಒಮ್ಮತ ವ್ಯಕ್ತಪಡಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh.M.B.