ಜಾಗತಿಕ ದಕ್ಷಿಣ ಮತ್ತು ಸಣ್ಣ ರಾಷ್ಟ್ರಗಳಿಗೆ ಹೆಚ್ಚಿನ ಸಹಕಾರ ಅಗತ್ಯ : ಪ್ರಧಾನಿ ಮೋದಿ
ಅಂತಾರಾಷ್ಟ್ರೀಯ
Pm g7


ನವದೆಹಲಿ, 17 ಜೂನ್ (ಹಿ.ಸ.) :

ಆ್ಯಂಕರ್ : ಅಭಿವೃದ್ಧಿಶೀಲ ರಾಷ್ಟ್ರಗಳು ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳಿಂದ ಉಂಟಾಗುವ ಆರ್ಥಿಕ ಆಘಾತಗಳನ್ನು ಎದುರಿಸಲು ನೆರವಾಗುವ ವಿಶೇಷ ವ್ಯವಸ್ಥೆಗಳನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದ ಇಂಧನ, ರಸಗೊಬ್ಬರ ಹಾಗೂ ಆಹಾರ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯಗಳು ‘ಜಾಗತಿಕ ದಕ್ಷಿಣ’ ರಾಷ್ಟ್ರಗಳ ಮೇಲೆ ದೀರ್ಘಕಾಲದ ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದರು.

ಫ್ರಾನ್ಸ್ನ ಎವಿಯನ್ನಲ್ಲಿ ನಡೆದ ಜಿ7 ಶೃಂಗಸಭೆಯ ಔಟ್ರೀಚ್ ಅಧಿವೇಶನದಲ್ಲಿ ‘ಎಲ್ಲರಿಗೂ ಸಮತೋಲಿತ, ಹಂಚಿಕೆಯ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಪುನರುಜ್ಜೀವನಗೊಳಿಸುವುದು’ ಎಂಬ ವಿಷಯದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಈ ಮಹತ್ವದ ವಿಷಯವನ್ನು ಆಯ್ಕೆ ಮಾಡಿದ ಜಿ7 ಅಧ್ಯಕ್ಷ ರಾಷ್ಟ್ರವಾದ ಫ್ರಾನ್ಸ್ ಅನ್ನು ಶ್ಲಾಘಿಸಿದರು.

“ನಾವು ನಿಜವಾಗಿಯೂ ಜಾಗತಿಕ ಏಕತೆಯನ್ನು ಬಲಪಡಿಸಲು ಬಯಸಿದರೆ, ಅತ್ಯಂತ ದುರ್ಬಲ ರಾಷ್ಟ್ರಗಳು ಈ ಬಿಕ್ಕಟ್ಟುಗಳ ಭಾರವನ್ನು ಏಕಾಂಗಿಯಾಗಿ ಹೊರುವ ಪರಿಸ್ಥಿತಿ ಬರಬಾರದು” ಎಂದು ಮೋದಿ ಹೇಳಿದರು.

ಅಭಿವೃದ್ಧಿ ಎಂದರೆ ಕೇವಲ ಜಿಡಿಪಿ ಅಥವಾ ವ್ಯಾಪಾರದ ಅಂಕಿ-ಅಂಶಗಳಲ್ಲ, ಅದು ಯಾರಿಗಾಗಿ, ಯಾರೊಂದಿಗೆ ಮತ್ತು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದೇ ಮುಖ್ಯ ಪ್ರಶ್ನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತವು ಸಮಗ್ರ ಮತ್ತು ಹಂಚಿಕೆಯ ಅಭಿವೃದ್ಧಿಯ ಮೂಲಕ ಜನರ ನಿರೀಕ್ಷೆಗಳನ್ನು ವಾಸ್ತವಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಭಾರತದ ಅಭಿವೃದ್ಧಿ ಪಯಣವು ಸಮಾವೇಶಾತ್ಮಕತೆ, ವ್ಯಾಪಕತೆ ಮತ್ತು ಪ್ರಜಾಪ್ರಭುತ್ವದ ಸಬಲೀಕರಣದ ಮೇಲೆ ಆಧಾರಿತವಾಗಿದೆ. ಇದು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ಎಂಬ ತತ್ವದಿಂದ ಪ್ರೇರಿತವಾಗಿದೆ ಎಂದು ಪ್ರಧಾನಿ ಹೇಳಿದರು.

ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಹಾಗೂ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಆರಂಭಿಸುವ ಮೂಲಕ ಭಾರತ ಈ ದೃಷ್ಟಿಕೋನವನ್ನು ಜಗತ್ತಿಗೆ ಪರಿಚಯಿಸಿದೆ ಎಂದು ಅವರು ಹೇಳಿದರು. ಇದೇ ಮಾದರಿಯಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಪ್ರಶಾಂತ ಸಾಗರದ ದ್ವೀಪ ರಾಷ್ಟ್ರಗಳೊಂದಿಗೆ ಹೊಸ ಸಂಪರ್ಕ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪರ್ಕ ಮೂಲಸೌಕರ್ಯ ಮತ್ತು ವ್ಯಾಪಾರ ವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಇಂಟರ್ನ್ಯಾಷನಲ್ ಮೊಬಿಲೈಸೇಶನ್ ಪಾರ್ಟ್ನರ್ಶಿಪ್ ಫಾರ್ ಅಕ್ಸಿಲರೇಟಿಂಗ್ ಕನೆಕ್ಟಿವಿಟಿ ಅಂಡ್ ಟ್ರೇಡ್’ (ಇಂಪ್ಯಾಕ್ಟ್) ಎಂಬ ಹೊಸ ಸಹಭಾಗಿತ್ವ ವೇದಿಕೆಯನ್ನು ರಚಿಸುವಂತೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಜಿ7 ರಾಷ್ಟ್ರಗಳ ಬಂಡವಾಳ, ಭಾರತದ ಪ್ರತಿಭೆ ಮತ್ತು ಜಾಗತಿಕ ದಕ್ಷಿಣ ರಾಷ್ಟ್ರಗಳ ಪಾಲ್ಗೊಳ್ಳುವಿಕೆಯಿಂದ ಈ ಯೋಜನೆಯನ್ನು ರೂಪಿಸಬಹುದು ಎಂದು ಹೇಳಿದರು.

ಇದರ ಜೊತೆಗೆ, ಜಾಗತಿಕ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ವಿಶ್ವಾಸಾರ್ಹ ಕೌಶಲ್ಯಯುತ ಮಾನವ ಸಂಪನ್ಮೂಲದ ಚಲನವಲನವನ್ನು ಉತ್ತೇಜಿಸಲು ‘ಗ್ಲೋಬಲ್ ಸ್ಕಿಲ್ಸ್ ಪಾರ್ಟ್ನರ್ಶಿಪ್’ ರಚಿಸುವಂತೆ ಅವರು ಕರೆ ನೀಡಿದರು. ಅನೇಕ ರಾಷ್ಟ್ರಗಳು ವಯೋವೃದ್ಧ ಜನಸಂಖ್ಯೆಯ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಭಾರತ ಸೇರಿದಂತೆ ಜಾಗತಿಕ ದಕ್ಷಿಣ ರಾಷ್ಟ್ರಗಳಲ್ಲಿ ಯುವ ಪ್ರತಿಭೆ, ಉದ್ಯಮಶೀಲತೆ ಮತ್ತು ಕೌಶಲ್ಯದ ಅಪಾರ ಸಂಪತ್ತು ಇದೆ ಎಂದು ಪ್ರಧಾನಿ ಹೇಳಿದರು.

ಜಿ7 ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಮಾನ ಅವಕಾಶಗಳು, ಪರಸ್ಪರ ಸಹಕಾರ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಜಾಗತಿಕ ಆರ್ಥಿಕತೆಯನ್ನು ಹೆಚ್ಚು ಸಮತೋಲನಯುತ ಹಾಗೂ ಎಲ್ಲರನ್ನು ಒಳಗೊಂಡ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯುವ ಅಗತ್ಯವನ್ನು ಒತ್ತಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande