ನೀಟ್ ಮರುಪರೀಕ್ಷೆ : ಭಾರತದಲ್ಲಿ ಟೆಲಿಗ್ರಾಂ ವೇದಿಕೆಗೆ ತಾತ್ಕಾಲಿಕ ನಿರ್ಬಂಧ
ನವದೆಹಲಿ, 16 ಜೂನ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ (ನೀಟ್-ಯುಜಿ) ಮರುಪರೀಕ್ಷೆಯನ್ನು ಸುರಕ್ಷಿತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾರತದಲ್ಲಿ ಟೆಲಿಗ್ರಾಂ ವೇದಿಕೆಗೆ ಜೂನ್ 22ರವರೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಸಂಘಟಿತ
Telegram pic


ನವದೆಹಲಿ, 16 ಜೂನ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ (ನೀಟ್-ಯುಜಿ) ಮರುಪರೀಕ್ಷೆಯನ್ನು ಸುರಕ್ಷಿತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾರತದಲ್ಲಿ ಟೆಲಿಗ್ರಾಂ ವೇದಿಕೆಗೆ ಜೂನ್ 22ರವರೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಸಂಘಟಿತ ನಕಲು ಜಾಲಗಳು ಹಾಗೂ ಸೈಬರ್ ವಂಚಕರಿಂದ ಅಭ್ಯರ್ಥಿಗಳನ್ನು ಮೋಸಗೊಳಿಸುವ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಭಾರತದಲ್ಲಿ ಟೆಲಿಗ್ರಾಂ ಸೇವೆಯ ಪ್ರವೇಶವನ್ನು ಸೀಮಿತಗೊಳಿಸುವುದರ ಜೊತೆಗೆ ಸಂದೇಶ ತಿದ್ದುಪಡಿ ಸೌಲಭ್ಯಕ್ಕೂ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69A ಅಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳ ಪ್ರಕಾರ, ಟೆಲಿಗ್ರಾಂ ಸೇವೆಗೆ ಜೂನ್ 22ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಅಲ್ಲದೆ, ಭಾರತದಲ್ಲಿ ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳನ್ನು ಸಂಪಾದಿಸುವ ಸೌಲಭ್ಯವನ್ನು ಜೂನ್ 30ರವರೆಗೆ ಸ್ಥಗಿತಗೊಳಿಸುವಂತೆ ವೇದಿಕೆಗೆ ಸೂಚಿಸಲಾಗಿದೆ.

ಎನ್ಟಿಎ ಪ್ರಕಾರ, ಕಳೆದ ಕೆಲವು ವಾರಗಳಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ, ಕೇಂದ್ರ ಗೃಹ ಸಚಿವಾಲಯ, ವಿವಿಧ ರಾಜ್ಯಗಳ ಪೊಲೀಸರು ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಹಯೋಗದಲ್ಲಿ ಟೆಲಿಗ್ರಾಂನಲ್ಲಿ ಸಕ್ರಿಯವಾಗಿದ್ದ ನಕಲಿ ಚಾನೆಲ್ಗಳು, ಗುಂಪುಗಳು ಮತ್ತು ಬಾಟ್ಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ನೀಟ್ ಪ್ರಶ್ನೆಪತ್ರಿಕೆ ಒದಗಿಸುವುದಾಗಿ ಸುಳ್ಳು ಭರವಸೆ ನೀಡಿ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳಿಂದ ಸಾವಿರಗಳಿಂದ ಲಕ್ಷಾಂತರ ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದ ಹಲವು ಚಾನೆಲ್ಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ ಎಂದು ಎನ್ಟಿಎ ತಿಳಿಸಿದೆ.

“ಪೇಪರ್ ಲೀಕ್ ನೀಟ್”, “ರೀ-ನೀಟ್ 2026”, “ಪ್ರೈವೇಟ್ ಮಾಫಿಯಾ” ಹಾಗೂ “ರೀ ನೀಟ್ ಮಾಫಿಯಾ” ಮುಂತಾದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾನೆಲ್ಗಳು ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ತಮ್ಮ ಬಳಿ ಇದೆ ಎಂದು ಸುಳ್ಳು ಪ್ರಚಾರ ಮಾಡುತ್ತಿವೆ. ಆದರೆ ಪ್ರಶ್ನೆಪತ್ರಿಕೆ ಸಂಪೂರ್ಣ ಭದ್ರತಾ ವ್ಯವಸ್ಥೆಯಲ್ಲಿದ್ದು, ಇಂತಹ ಎಲ್ಲ ದಾವೆಗಳು ವಂಚನೆಯಾಗಿವೆ ಎಂದು ಎನ್ಟಿಎ ಸ್ಪಷ್ಟಪಡಿಸಿದೆ.

ಸಂದೇಶ ತಿದ್ದುಪಡಿ ಸೌಲಭ್ಯದ ದುರುಪಯೋಗದ ಮೂಲಕ, ಪರೀಕ್ಷೆ ಮುಗಿದ ನಂತರ ನೈಜ ಪ್ರಶ್ನೆಪತ್ರಿಕೆಯನ್ನು ಹಳೆಯ ಸಂದೇಶಗಳಿಗೆ ಸೇರಿಸಿ, ಅದು ಮುಂಚಿತವಾಗಿಯೇ ಲಭ್ಯವಿತ್ತು ಎಂಬ ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಲಾಗುತ್ತಿತ್ತು ಎಂದು ಸಂಸ್ಥೆ ತಿಳಿಸಿದೆ. ಈ ರೀತಿಯ ಕಪಟ ವಿಷಯ ಸೃಷ್ಟಿಯನ್ನು ತಡೆಯಲು ಸರ್ಕಾರದ ನಿರ್ದೇಶನಗಳು ಹೊರಡಿಸಲಾಗಿದೆ.

ಪ್ರಕಟಣೆಯಲ್ಲಿ ಬಿಹಾರ ಪೊಲೀಸ್ ಆರ್ಥಿಕ ಅಪರಾಧ ಘಟಕ ನೀಡಿದ್ದ ಸಾರ್ವಜನಿಕ ಎಚ್ಚರಿಕೆ ಹಾಗೂ ಅಹಮದಾಬಾದ್ ಸೈಬರ್ ಕ್ರೈಂ ಶಾಖೆ ಕೈಗೊಂಡ ಕಾರ್ಯಾಚರಣೆಯನ್ನೂ ಉಲ್ಲೇಖಿಸಲಾಗಿದೆ. ಅಹಮದಾಬಾದ್ನಲ್ಲಿ ಎಂಟು ಟೆಲಿಗ್ರಾಂ ಚಾನೆಲ್ಗಳನ್ನು ನಿರ್ವಹಿಸುತ್ತಿದ್ದ ಅಂತರರಾಜ್ಯ ಸೈಬರ್ ವಂಚನಾ ಜಾಲದ ಸದಸ್ಯರನ್ನು ಬಂಧಿಸಲಾಗಿದ್ದು, ತನಿಖೆಯಲ್ಲಿ ಸುಮಾರು 1.5 ಕೋಟಿ ರೂಪಾಯಿ ಹಣದ ವಹಿವಾಟು ಹಾಗೂ ಒಂದೇ ತಿಂಗಳಲ್ಲಿ ಸುಮಾರು 1,000 ಮೊಬೈಲ್ ಸಂಖ್ಯೆಗಳೊಂದಿಗೆ ಸಂಪರ್ಕ ಸಾಧಿಸಿದ್ದ ಮಾಹಿತಿ ಬೆಳಕಿಗೆ ಬಂದಿದೆ.

ಟೆಲಿಗ್ರಾಂ ಬಳಸುತ್ತಿರುವ ಲಕ್ಷಾಂತರ ಕಾನೂನುಬದ್ಧ ಬಳಕೆದಾರರಿಗೆ ಉಂಟಾಗುವ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿರುವ ಎನ್ಟಿಎ, ಈ ನಿರ್ಬಂಧವು ಪರೀಕ್ಷಾ ಅವಧಿಗೆ ಮಾತ್ರ ಸೀಮಿತವಾಗಿದ್ದು, ಪರೀಕ್ಷೆಯ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ತಿಳಿಸಿದೆ.

ನೀಟ್ (ಯುಜಿ)-2026 ಮರುಪರೀಕ್ಷೆಯು ಜೂನ್ 21ರಂದು ಪೂರ್ವನಿಗದಿತ ವೇಳಾಪಟ್ಟಿಯಂತೆ ನಡೆಯಲಿದ್ದು, ಅಭ್ಯರ್ಥಿಗಳು ಹಾಗೂ ಪೋಷಕರು ಯಾವುದೇ ಅಪರಿಶೀಲಿತ ಮಾಹಿತಿಯನ್ನು ನಂಬಬಾರದು ಎಂದು ಮನವಿ ಮಾಡಲಾಗಿದೆ. ಅಧಿಕೃತ ಮಾಹಿತಿ ಪಡೆಯಲು ಎನ್ಟಿಎ ವೆಬ್ಸೈಟ್ ಮತ್ತು ಪರಿಶೀಲಿತ ಸಾಮಾಜಿಕ ಜಾಲತಾಣ ಖಾತೆಗಳನ್ನು ಮಾತ್ರ ಅವಲಂಬಿಸಬೇಕು ಎಂದು ಸೂಚಿಸಲಾಗಿದೆ.

ಯಾವುದೇ ರೀತಿಯ ಆನ್ಲೈನ್ ಅಥವಾ ಆಫ್ಲೈನ್ ವಂಚನೆ ಕುರಿತು ಮಾಹಿತಿ ದೊರೆತಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ಗೆ ದೂರು ಸಲ್ಲಿಸಬಹುದು ಎಂದು ಎನ್ಟಿಎ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande