
ಬೆಂಗಳೂರು, 16 ಜೂನ್ (ಹಿ.ಸ.) :
ಆ್ಯಂಕರ್ : ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಕಾರ್ಯಾಚರಣೆ ನಡೆಸಿದ್ದು, ಹಲವು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇತರೆ ಆಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ನ ಹೆಚ್ಚುವರಿ ನಿರ್ದೇಶಕ ರಾಜಣ್ಣ ಹಾಗೂ ಯಲಹಂಕ ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಉದಯ್ ಕುಮಾರ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಕುರಿತು ಬಂದಿದ್ದ ದೂರುಗಳ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದೆ.
ಕಲಬುರಗಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ನಿವೃತ್ತ ಪಂಚಾಯತ್ ರಾಜ್ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಮಾಣಿಕ್ ಕನಕಟ್ಟಿ ಅವರ ಮನೆ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಕಲಬುರಗಿ ನಗರದ ಗೋದುತಾಯಿ ನಗರದಲ್ಲಿರುವ ನಿವಾಸ, ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಮನೆ, ಹುಮ್ನಾಬಾದ್ನ ಎರಡು ವಾಣಿಜ್ಯ ಸಂಕೀರ್ಣಗಳು ಹಾಗೂ ತೋಟದ ಮನೆಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದ ತಂಡ ಶೋಧ ಕಾರ್ಯ ನಡೆಸಿದೆ.
ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮೋಹನ್ ಅವರ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಕಲ್ಯಾಣನಗರದಲ್ಲಿರುವ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಇನ್ನು ದಾವಣಗೆರೆಯಲ್ಲಿ ಮೂವರು ಹಿರಿಯ ಅಧಿಕಾರಿಗಳ ಮನೆ, ಕಚೇರಿ ಹಾಗೂ ಫಾರ್ಮ್ಹೌಸ್ಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣ ನಾಯ್ಕ್, ಎನ್ಡಬ್ಲ್ಯೂಕೆಆರ್ಟಿಸಿ ಮುಖ್ಯ ಯಾಂತ್ರಿಕ ಎಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ ಹಾಗೂ ಕೆಆರ್ಐಡಿಎಲ್ ಅಧೀಕ್ಷಕ ಎಂಜಿನಿಯರ್ ಸಣ್ಣ ಕೆಂಚಪ್ಪ ಅವರ ವಿರುದ್ಧ ಶೋಧ ಕಾರ್ಯ ಮುಂದುವರಿದಿದೆ.
ಒಟ್ಟು 12 ವಿಶೇಷ ತಂಡಗಳು ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದು, ಆಸ್ತಿ ದಾಖಲೆಗಳು, ಬ್ಯಾಂಕ್ ವ್ಯವಹಾರಗಳು ಹಾಗೂ ಇತರೆ ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.