
ನವದೆಹಲಿ, 16 ಜೂನ್ (ಹಿ.ಸ.) :
ಆ್ಯಂಕರ್ : ಪ್ರಜಾಪ್ರಭುತ್ವದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಜನಭಾಗವಹಿಸುವಿಕೆ ಅಗತ್ಯವೆಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಒತ್ತಿ ಹೇಳಿದರು. ಯುವಕರ ಶಕ್ತಿ, ನವೋತ್ಸಾಹ, ನಾಯಕತ್ವ ಸಾಮರ್ಥ್ಯ ಹಾಗೂ ಕರ್ತವ್ಯಪ್ರಜ್ಞೆಯ ಮೂಲಕವೇ ವಿಕಸಿತ ಭಾರತ-2047 ನಿರ್ಮಾಣ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಸತ್ ಭವನ ಆವರಣದ ಸಂವಿಧಾನ ಸದನದ ಸೆಂಟ್ರಲ್ ಹಾಲ್ನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ‘ವಿಕಸಿತ ಭಾರತ ಯುವ ಸಂಸತ್-2026’ ಕಾರ್ಯಕ್ರಮದ ಭಾಗವಹಿಸುವವರನ್ನು ಉದ್ದೇಶಿಸಿ ಮಾತನಾಡಿದ ಓಂ ಬಿರ್ಲಾ, ವೈವಿಧ್ಯಮಯ ಸಂಸ್ಕೃತಿಗಳು ಹಾಗೂ ವಿಭಿನ್ನ ಭೌಗೋಳಿಕ ಪರಿಸ್ಥಿತಿಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಜನಸಂಖ್ಯೆಯ ರಾಷ್ಟ್ರವಾಗಿದ್ದರೂ, ಸ್ವಾತಂತ್ರ್ಯಾನಂತರ ಭಾರತವು ಹೆಚ್ಚುತ್ತಿರುವ ಜನ ಭಾಗವಹಿಸುವಿಕೆಯೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವವು ದೇಶದ ಕಾರ್ಯಸಂಸ್ಕೃತಿ ಮತ್ತು ಚಿಂತನೆಯ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದರು. ದೇಶದ ಭವಿಷ್ಯವನ್ನು ರೂಪಿಸಲು ಹಾಗೂ ವಿಕಸಿತ ಭಾರತದ ಗುರಿ ಸಾಧಿಸಲು ಪ್ರಜಾಪ್ರಭುತ್ವದಲ್ಲಿ ಸಕ್ರಿಯ ಮತ್ತು ಸಮಗ್ರ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಓಂ ಬಿರ್ಲಾ ಅವರು ರಾಷ್ಟ್ರೀಯ ಮಟ್ಟದ ವಿಕಸಿತ ಭಾರತ ಯುವ ಸಂಸತ್ 2026 ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನಸುಖ್ ಮಾಂಡವಿಯಾ ಉಪಸ್ಥಿತರಿದ್ದರು.
ಪ್ರತಿ ವರ್ಷ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ವಿಕಸಿತ ಭಾರತ ಯುವ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಮಹತ್ವದ ಉಪಕ್ರಮವು ದೇಶದ ವಿವಿಧ ಭಾಗಗಳ ಯುವಕರಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಗಳು, ನೀತಿ ಚರ್ಚೆಗಳು ಹಾಗೂ ಸಂಸತ್ತಿನ ಕಾರ್ಯವೈಖರಿಯಲ್ಲಿ ಭಾಗವಹಿಸುವ ಅಪೂರ್ವ ಅವಕಾಶವನ್ನು ಒದಗಿಸುತ್ತದೆ.
ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ವಿಕಸಿತ ಭಾರತ-2047 ಗುರಿಯತ್ತ ದೇಶದ ಪಯಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.