
ನವದೆಹಲಿ, 16 ಜೂನ್ (ಹಿ.ಸ.) :
ಆ್ಯಂಕರ್ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಔಷಧ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ತಿದ್ದುಪಡಿ ಮಾಡಿದೆ. ಔಷಧ ನಿಯಮಗಳು-1945ರಲ್ಲಿ ಬದಲಾವಣೆ ತಂದು, ಸಣ್ಣ ಗ್ರಾಮಗಳಲ್ಲಿ ಕೆಮ್ಮಿನ ಸಿರಪ್ ಮಾರಾಟಕ್ಕೆ ನೀಡಲಾಗಿದ್ದ ವಿನಾಯಿತಿಯನ್ನು ಹಿಂತೆಗೆದುಕೊಂಡಿದೆ. ಇದರೊಂದಿಗೆ ಇನ್ನು ಮುಂದೆ ಸಣ್ಣ ಗ್ರಾಮಗಳಲ್ಲಿಯೂ ಪರವಾನಗಿ ಇಲ್ಲದೆ ಕೆಮ್ಮಿನ ಸಿರಪ್ ಮಾರಾಟ ಮಾಡಲು ಅವಕಾಶ ಇರುವುದಿಲ್ಲ.
ಮಂಗಳವಾರ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈವರೆಗೆ 1,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಕೆಮ್ಮಿನ ಸಿರಪ್ ಮಾರಾಟಕ್ಕೆ ಕೆಲವು ಪರವಾನಗಿ ಸಂಬಂಧಿತ ನಿಯಮಗಳಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಹೊಸ ತಿದ್ದುಪಡಿ ಮೂಲಕ ಸಂಬಂಧಿತ ನಿಯಮದಲ್ಲಿದ್ದ “ಸಿರಪ್” ಎಂಬ ಪದವನ್ನು ತೆಗೆದುಹಾಕಲಾಗಿದೆ.
ಈ ಬದಲಾವಣೆಯ ಪರಿಣಾಮವಾಗಿ, ಸಣ್ಣ ಗ್ರಾಮಗಳಲ್ಲಿಯೂ ಕೆಮ್ಮಿನ ಸಿರಪ್ ಸೇರಿದಂತೆ ಸಿರಪ್ ಆಧಾರಿತ ಔಷಧಿಗಳ ಮಾರಾಟ ಮತ್ತು ವಿತರಣೆ ಕೇವಲ ಮಾನ್ಯ ಪರವಾನಗಿ ಹೊಂದಿರುವ ಮೆಡಿಕಲ್ ಸ್ಟೋರ್ಗಳು ಅಥವಾ ಔಷಧ ಮಳಿಗೆಗಳ ಮೂಲಕವೇ ನಡೆಯಬೇಕು. ಪರವಾನಗಿ ಇಲ್ಲದೆ ಇಂತಹ ಔಷಧಿಗಳನ್ನು ಮಾರಾಟ ಮಾಡುವುದು ಇನ್ನು ಮುಂದೆ ನಿಯಮಬಾಹಿರವಾಗಲಿದೆ.
ಸಚಿವಾಲಯದ ಪ್ರಕಾರ, ಸಿರಪ್ ಆಧಾರಿತ ಔಷಧಿಗಳ ಮಾರಾಟ ಮತ್ತು ವಿತರಣೆಯ ಮೇಲೆ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಉತ್ತಮಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೆ, ಕೆಮ್ಮಿನ ಸಿರಪ್ ಮತ್ತು ಇತರ ಸಿರಪ್ ಆಧಾರಿತ ಔಷಧಿಗಳ ಉತ್ಪಾದನೆ, ವಿತರಣೆ ಹಾಗೂ ಮಾರಾಟದಲ್ಲಿ ತೊಡಗಿರುವ ಎಲ್ಲಾ ತಯಾರಕರು, ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಕಾಯ್ದೆ, 1940 ಹಾಗೂ ಡ್ರಗ್ಸ್ ರೂಲ್ಸ್, 1945 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.