ಶ್ರೀರಾಮ ಜನ್ಮಭೂಮಿ ದೇವಸ್ಥಾನದ ದೇಣಿಗೆ ಅವ್ಯವಹಾರ : ನ್ಯಾಯಾಧೀಶರಿಂದ ತನಿಖೆಗೆ ಕಾಂಗ್ರೆಸ್ ಆಗ್ರಹ
ನವದೆಹಲಿ, 16 ಜೂನ್ (ಹಿ.ಸ.) : ಆ್ಯಂಕರ್ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ಬಂದಿರುವ ದೇಣಿಗೆ ಮತ್ತು ಕಾಣಿಕೆ ಹಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಕಾಲಮಿತಿಯೊಳಗಿನ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. ದೇಶದ ಜನರ
ಕಾಂಗ್ರೆಸ್ ಪತ್ರಿಕಾಗೋಷ್ಠಿ


ನವದೆಹಲಿ, 16 ಜೂನ್ (ಹಿ.ಸ.) :

ಆ್ಯಂಕರ್ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ಬಂದಿರುವ ದೇಣಿಗೆ ಮತ್ತು ಕಾಣಿಕೆ ಹಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಕಾಲಮಿತಿಯೊಳಗಿನ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. ದೇಶದ ಜನರ ಧಾರ್ಮಿಕ ನಂಬಿಕೆ ಹಾಗೂ ಭಕ್ತಿಯೊಂದಿಗೆ ದೊಡ್ಡ ಮಟ್ಟದ ವಂಚನೆ ನಡೆದಿದೆ ಎಂದು ಪಕ್ಷ ಆರೋಪಿಸಿದೆ.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ ರಾಯ್ ಹಾಗೂ ಕಾಂಗ್ರೆಸ್ ವಿಧಾನಮಂಡಲ ಪಕ್ಷದ ನಾಯಕಿ ಆರಾಧನಾ ಮಿಶ್ರಾ ಮಾತನಾಡಿ, ಶ್ರೀರಾಮ ಜನ್ಮಭೂಮಿ ಸಂಬಂಧ ಇತ್ತೀಚೆಗೆ ಹೊರಬರುತ್ತಿರುವ ಮಾಹಿತಿಗಳು ಸಂಘಟಿತ ಭ್ರಷ್ಟಾಚಾರದ ಚಿತ್ರಣವನ್ನು ನೀಡುತ್ತಿವೆ ಎಂದು ಆರೋಪಿಸಿದರು.

ಅಜಯ್ ರೈ ಮಾತನಾಡಿ, ಶ್ರೀರಾಮ ಜನ್ಮಭೂಮಿ ಶಿಲಾಪೂಜೆಯ ಹೆಸರಿನಲ್ಲಿ ಭಾರೀ ಪ್ರಮಾಣದ ಹಣ ಸಂಗ್ರಹಿಸಲಾಗಿದ್ದು, ಅದರ ಸರಿಯಾದ ಲೆಕ್ಕಪತ್ರ ಸಾರ್ವಜನಿಕರಿಗೆ ಲಭ್ಯವಿಲ್ಲ ಎಂದು ದೂರಿದರು. 1,400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದರು.

ಭೂಮಿ ಖರೀದಿ, ನಿರ್ಮಾಣ ಕಾಮಗಾರಿ ಮತ್ತು ದೇಣಿಗೆ ಸಂಗ್ರಹಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, ಈ ಕುರಿತು ರಚಿಸಲಾದ ವಿಶೇಷ ತನಿಖಾ ತಂಡದ (ಎಸ್ಐಟಿ) ವರದಿ ಒಂದು ವಾರದೊಳಗೆ ಪ್ರಕಟವಾಗಬೇಕು ಎಂದು ಆಗ್ರಹಿಸಿದರು. ಆದರೆ ತನಿಖೆಯ ಜವಾಬ್ದಾರಿಯನ್ನು ಮಹಾಕುಂಭ ಮೇಳದ ವೇಳೆ ನಡೆದ ಕಾಲ್ತುಳಿತ ಪ್ರಕರಣದ ತನಿಖೆಯಲ್ಲಿಯೇ ಪ್ರಶ್ನೆ ಎದುರಿಸುತ್ತಿರುವ ಅಧಿಕಾರಿಗೆ ನೀಡಲಾಗಿದೆ ಎಂದು ಅವರು ಟೀಕಿಸಿದರು.

ಆರಾಧನಾ ಮಿಶ್ರಾ ಮಾತನಾಡಿ, ದೇವಸ್ಥಾನದ ಕಾಣಿಕೆ ಹಣದಲ್ಲಿ ಅಕ್ರಮದ ಆರೋಪ ಈಗ ಕೇಳಿ ಬಂದಿದ್ದರೂ, ಭೂಸ್ವಾಧೀನ ಪ್ರಕ್ರಿಯೆಯಲ್ಲಿಯೂ ಗಂಭೀರ ಪ್ರಶ್ನೆಗಳು ಉದ್ಭವಿಸಿದ್ದವು ಎಂದು ಹೇಳಿದರು. ಕಡಿಮೆ ಬೆಲೆಗೆ ಖರೀದಿಸಿದ ಜಮೀನುಗಳನ್ನು ಟ್ರಸ್ಟ್ಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು ಎಂದು ಅವರು ಹೇಳಿದರು.

ಇದಲ್ಲದೆ, ದೇವಸ್ಥಾನದ ಸುತ್ತಮುತ್ತಲಿನ ಸೇನಾ ಭೂಮಿಯನ್ನು ನಿಯಮ ಬದಲಾವಣೆಗಳ ಮೂಲಕ ಪ್ರಭಾವಿ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿದೆ ಎಂಬ ಆರೋಪವನ್ನೂ ಅವರು ಮುಂದಿಟ್ಟರು. ದೇವಸ್ಥಾನ ನಿರ್ಮಾಣ ಕಾಮಗಾರಿಯ ಗುಣಮಟ್ಟವನ್ನೂ ಪ್ರಶ್ನಿಸಿದ ಅವರು, ಮೊದಲ ಮಳೆಯಲ್ಲೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕುಸಿದಿದ್ದು, ಗರ್ಭಗುಡಿಯೊಳಗೆ ನೀರು ಸೋರಿಕೆಯಾಗಿತ್ತು ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕರು ಈ ಎಲ್ಲ ಆರೋಪಗಳ ಕುರಿತು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ, ಸತ್ಯಾಂಶವನ್ನು ದೇಶದ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande