
ನವದೆಹಲಿ, 16 ಜೂನ್ (ಹಿ.ಸ.) :
ಆ್ಯಂಕರ್ : ಜನಗಣತಿ–2027ರ ಅಂಗವಾಗಿ ನಡೆಸಲಾಗುತ್ತಿರುವ ಮನೆಗಳ ಪಟ್ಟಿ ಸಿದ್ಧತೆ ಮತ್ತು ವಸತಿ ಜನಗಣತಿ (ಎಚ್ಎಲ್ಒ) ಮೊದಲ ಹಂತದ ಕಾರ್ಯ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ.
ಸಚಿವಾಲಯದ ಮಾಹಿತಿಯ ಪ್ರಕಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಚಂಡೀಗಢ, ಛತ್ತೀಸ್ಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ದೆಹಲಿ, ಗೋವಾ, ಹರಿಯಾಣ, ಜಾರ್ಖಂಡ್, ಕರ್ನಾಟಕ, ಲಕ್ಷದ್ವೀಪ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ ಮತ್ತು ಉತ್ತರಾಖಂಡಗಳಲ್ಲಿ ಜನಗಣತಿ–2027ರ ಮೊದಲ ಹಂತದ ಕಾರ್ಯ ಪೂರ್ಣಗೊಂಡಿದೆ.
ಮಹಾರಾಷ್ಟ್ರ, ಮೇಘಾಲಯ, ರಾಜಸ್ಥಾನ, ಜಾರ್ಖಂಡ್ ಹಾಗೂ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 16ರಿಂದ ಜೂನ್ 14ರವರೆಗೆ ಮನೆಗಳ ಪಟ್ಟಿ ಸಿದ್ಧತೆ ಮತ್ತು ವಸತಿ ಜನಗಣತಿ ಕಾರ್ಯ ನಡೆಸಲಾಗಿದ್ದು, ಅದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪಂಜಾಬ್ನಲ್ಲಿ ಈ ಪ್ರಕ್ರಿಯೆ ಜೂನ್ 13ರಂದು ಪೂರ್ಣಗೊಂಡಿದೆ.
ಇನ್ನೊಂದೆಡೆ, ಗುಜರಾತ್, ಜಮ್ಮು-ಕಾಶ್ಮೀರ, ಲಡಾಖ್, ಪುದುಚೇರಿ ಹಾಗೂ ಉತ್ತರ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ಹಿಮಾಚಲ ಪ್ರದೇಶದಲ್ಲಿ ಮಂಗಳವಾರದಿಂದ ಕ್ಷೇತ್ರ ಕಾರ್ಯಾಚರಣೆ ಆರಂಭವಾಗಿದ್ದು, ಜುಲೈ 15ರವರೆಗೆ ನಡೆಯಲಿದೆ.
ಕೇರಳ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಸ್ವಯಂ-ಗಣನೆ ಸೌಲಭ್ಯ ಆರಂಭಿಸಲಾಗಿದ್ದು, ಜೂನ್ 30ರವರೆಗೆ ನಾಗರಿಕರು ತಮ್ಮ ಮಾಹಿತಿಯನ್ನು ತಾವೇ ದಾಖಲಿಸಬಹುದು. ಬಳಿಕ ಜುಲೈ 1ರಿಂದ 30ರವರೆಗೆ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಾಗುತ್ತದೆ.
ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಜನಗಣತಿ–2027 ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನಡೆಯುತ್ತಿದೆ. ಇದಕ್ಕಾಗಿ ವಿಶೇಷ ಮೊಬೈಲ್ ಆ್ಯಪ್ಗಳನ್ನು ಬಳಸಲಾಗುತ್ತಿದ್ದು, ಜೊತೆಗೆ ಸಾಂಪ್ರದಾಯಿಕ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನೂ ಮುಂದುವರಿಸಲಾಗಿದೆ.
ಮನೆಗಳ ಪಟ್ಟಿ ಸಿದ್ಧತೆ ಮತ್ತು ವಸತಿ ಜನಗಣತಿಯ ಸಂದರ್ಭದಲ್ಲಿ ವಾಸಸ್ಥಿತಿಗಳು, ಕುಟುಂಬಗಳ ವಿವರಗಳು, ಲಭ್ಯ ಸೌಲಭ್ಯಗಳು ಹಾಗೂ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು 33 ಪ್ರಶ್ನೆಗಳ ಅಧಿಸೂಚಿತ ಪ್ರಶ್ನಾವಳಿಯ ಮೂಲಕ ಸಂಗ್ರಹಿಸಲಾಗುತ್ತಿದೆ.
ಜನಗಣತಿ ಪ್ರಕ್ರಿಯೆಯಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸಿ, ಗಣತಿದಾರರಿಗೆ ಸಂಪೂರ್ಣ ಸಹಕಾರ ನೀಡುವಂತೆ ಸಚಿವಾಲಯ ಮನವಿ ಮಾಡಿದೆ. ಜೊತೆಗೆ, ಜನಗಣತಿ ಕಾಯ್ದೆ–1948ರ ಅಡಿಯಲ್ಲಿ ಸಂಗ್ರಹವಾಗುವ ಎಲ್ಲಾ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿ ಇಡಲಾಗುತ್ತದೆ ಹಾಗೂ ಅವುಗಳನ್ನು ಕೇವಲ ಅಂಕಿಅಂಶ ಮತ್ತು ಅಭಿವೃದ್ಧಿ ಯೋಜನೆಗಳ ಉದ್ದೇಶಗಳಿಗೆ ಮಾತ್ರ ಬಳಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.