
ಬೆಂಗಳೂರು, 15 ಜೂನ್ (ಹಿ.ಸ.) :
ಆ್ಯಂಕರ್ : ಕಬ್ಬು ಹಾಗೂ ಇತರೆ ಕೃಷಿ ಉತ್ಪನ್ನಗಳಿಂದ ಉತ್ಪಾದನೆಯಾಗುವ ಎಥನಾಲ್ ಅನ್ನು ಶೇ.100ರಷ್ಟು ಪೆಟ್ರೋಲ್ ಮತ್ತು ಡೀಸೆಲ್ಗೆ ಪರ್ಯಾಯ ಇಂಧನವಾಗಿ ಬಳಸಲು ಕೇಂದ್ರ ಸರ್ಕಾರ ನೀಡಿರುವ ಅನುಮತಿ ರೈತರಿಗೆ ಹಾಗೂ ದೇಶದ ಆರ್ಥಿಕತೆಗೆ ಮಹತ್ವದ ಮೈಲಿಗಲ್ಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, 2006ರಲ್ಲಿ ಮೈಸೂರಿನಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳ ರೈತರ ಸಮಾವೇಶದಲ್ಲಿ ಕಬ್ಬಿನಿಂದ ಎಥನಾಲ್ ಉತ್ಪಾದನೆಗೆ ಉತ್ತೇಜನ ನೀಡಬೇಕು ಹಾಗೂ ಪೆಟ್ರೋಲ್ಗೆ ಎಥನಾಲ್ ಮಿಶ್ರಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ನಿರ್ಣಯದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿತ್ತು ಎಂದು ಸ್ಮರಿಸಿದ್ದಾರೆ.
ದೇಶದ ಪೆಟ್ರೋಲ್ ಮತ್ತು ಡೀಸೆಲ್ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ವಿದೇಶಿ ವಿನಿಮಯ ಉಳಿತಾಯ ಮಾಡಲು ಎಥನಾಲ್ ಬಳಕೆ ಅತ್ಯಗತ್ಯ ಎಂದು ಆಗಲೇ ರೈತರು ಪ್ರತಿಪಾದಿಸಿದ್ದರು. ಕಳೆದ ಎರಡು ದಶಕಗಳಿಂದ ಈ ಬೇಡಿಕೆಯನ್ನು ನಿರಂತರವಾಗಿ ಮುಂದಿಟ್ಟ ಪರಿಣಾಮ ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೇಳಿಕೆಯಂತೆ ಎಥನಾಲ್ ಬಳಕೆಯಿಂದ ದೇಶಕ್ಕೆ ಲಕ್ಷಾಂತರ ಕೋಟಿ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗುವ ಸಾಧ್ಯತೆ ಇದೆ. ಜೊತೆಗೆ ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಗಾರರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದ್ದು, ಎಥನಾಲ್ ಉತ್ಪಾದನಾ ಘಟಕಗಳ ನಡುವೆ ಸ್ಪರ್ಧೆ ಹೆಚ್ಚುವುದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಥನಾಲ್ ಆಧಾರಿತ ಇಂಧನ ಬಳಕೆಯು ರೈತರ ಆದಾಯ ಹೆಚ್ಚಿಸುವುದರ ಜೊತೆಗೆ ದೇಶದ ಇಂಧನ ಸ್ವಾವಲಂಬನೆಗೆ ಸಹಕಾರಿಯಾಗಲಿದ್ದು, ಪರಿಸರ ಸ್ನೇಹಿ ಇಂಧನ ಬಳಕೆಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.