
ನವದೆಹಲಿ, 15 ಜೂನ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಜೂನ್ 19ರಂದು ಜಿನೀವಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಕುರಿತು ಬಂದಿರುವ ಸುದ್ದಿಯನ್ನು ಸ್ವಾಗತಿಸಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಕುರಿತು ಎಕ್ಸನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಒಪ್ಪಂದದ ಸಂಪೂರ್ಣ ವಿವರಗಳು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಇದು ಮಧ್ಯಂತರ ಸ್ವರೂಪದ ಒಪ್ಪಂದವಾಗಿದ್ದರೂ, ಎರಡೂ ರಾಷ್ಟ್ರಗಳು ಅದಕ್ಕೆ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಸಾಮಾನ್ಯೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಪುನಃ ನಿರ್ಬಂಧವಿಲ್ಲದೆ ತೆರೆಯುವುದರಿಂದ ಭಾರತಕ್ಕೆ ನಿಶ್ಚಿತವಾಗಿ ಪರಿಹಾರ ಸಿಗಲಿದೆ. ಆದರೆ ದೇಶದ ಆರ್ಥಿಕತೆ ಎದುರಿಸುತ್ತಿರುವ ಮೂಲಭೂತ ಹಾಗೂ ರಚನಾತ್ಮಕ ಸಮಸ್ಯೆಗಳು ತಕ್ಷಣ ಪರಿಹಾರವಾಗುತ್ತವೆ ಎನ್ನಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ರೂಪಾಯಿ ಮೌಲ್ಯ ಒತ್ತಡದಲ್ಲಿದ್ದು, ಡಾಲರ್ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಹೆಚ್ಚುತ್ತಿದೆ. ಜೊತೆಗೆ ಜಿಡಿಪಿ ಬೆಳವಣಿಗೆಯ ಪ್ರಮುಖ ಅಂಶವಾದ ಖಾಸಗಿ ಹೂಡಿಕೆ ದರ ಹಲವು ವರ್ಷಗಳಿಂದ ಕುಸಿದಿದೆ. ಇದಕ್ಕೆ ನೈಜ ವೇತನದ ಸ್ಥಗಿತ, ಚೀನಾದಿಂದ ಹೆಚ್ಚುತ್ತಿರುವ ಆಮದುಗಳಿಂದ ಉಂಟಾದ ವ್ಯಾಪಾರ ಕೊರತೆ ಹಾಗೂ ತೆರಿಗೆ ಮತ್ತು ತನಿಖಾ ಸಂಸ್ಥೆಗಳಿಗೆ ನೀಡಿರುವ ಹೆಚ್ಚಿನ ಅಧಿಕಾರಗಳಿಂದ ಹೂಡಿಕೆ ವಾತಾವರಣದ ಮೇಲೆ ಉಂಟಾಗಿರುವ ಪರಿಣಾಮಗಳು ಕಾರಣವಾಗಿವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಅಲ್ಲದೆ, 2008ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿದ್ದ ಪಾಕಿಸ್ತಾನ ಈಗ ಹೊಸ ಪ್ರಾದೇಶಿಕ ಹಾಗೂ ಜಾಗತಿಕ ಪ್ರಭಾವವನ್ನು ಪಡೆಯುತ್ತಿರುವಂತೆ ಕಾಣುತ್ತಿದೆ. ಚೀನಾದೊಂದಿಗೆ ಅದರ ಹೆಚ್ಚುತ್ತಿರುವ ಕಾರ್ಯತಂತ್ರದ ಸಹಭಾಗಿತ್ವವು ಭಾರತದ ವಿದೇಶಾಂಗ ನೀತಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಕುರಿತ ಭಾರತದ ನಿಲುವಿನಲ್ಲಿ ಹೆಚ್ಚಿನ ಸಮತೋಲನ ಅಗತ್ಯವಿದೆ. ಮಾನವೀಯ ಮೌಲ್ಯಗಳು ಹಾಗೂ ಭಾರತದ ದೀರ್ಘಕಾಲದ ರಾಜತಾಂತ್ರಿಕ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವ ವಿದೇಶಾಂಗ ನೀತಿ ಅನುಸರಿಸಬೇಕು ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.