
ನವದೆಹಲಿ, 15 ಜೂನ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹಬಳಕೆಯ ಎಲ್ಪಿಜಿ ಪೂರೈಕೆ ಯಾವುದೇ ಅಡಚಣೆಯಿಲ್ಲದೆ ಮುಂದುವರಿದಿದ್ದು, ಕಚ್ಚಾ ತೈಲದ ಸಾಕಷ್ಟು ಸಂಗ್ರಹವನ್ನು ಕಾಯ್ದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಸೋಮವಾರ ನವದೆಹಲಿಯಲ್ಲಿ ನಡೆದ ಅಂತರ-ಸಚಿವಾಲಯಗಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಎಲ್ಲಾ ತೈಲ ಶುದ್ಧೀಕರಣ ಘಟಕಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ತಿಳಿಸಿದರು.
ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಪೂರೈಕೆ ಸ್ಥಿರವಾಗಿದ್ದರೂ, ಕೆಲವು ಚಿಲ್ಲರೆ ಇಂಧನ ಮಾರಾಟ ಕೇಂದ್ರಗಳಲ್ಲಿ ಮಾರಾಟದಲ್ಲಿ ಅಸಾಮಾನ್ಯ ಏರಿಕೆ ಕಂಡುಬರುತ್ತಿದೆ ಎಂದು ಅವರು ಹೇಳಿದರು. ಇದಕ್ಕೆ ಕಾರಣವಾಗಿ ಕೈಗಾರಿಕಾ, ಸಾಂಸ್ಥಿಕ ಹಾಗೂ ವಾಣಿಜ್ಯ ಬಳಕೆದಾರರು ನೇರ ಸರಬರಾಜಿನ ಬದಲು ಚಿಲ್ಲರೆ ಪಂಪ್ಗಳಿಂದ ಇಂಧನ ಖರೀದಿಸಲು ಆರಂಭಿಸಿರುವುದನ್ನು ಉಲ್ಲೇಖಿಸಿದರು.
ಮೇ ತಿಂಗಳಲ್ಲಿಯೇ ಸುಮಾರು 42 ಕೋಟಿ ಲೀಟರ್ ಡೀಸೆಲ್ ಮಾರಾಟವು ಬಲ್ಕ್ ಪೂರೈಕೆಯಿಂದ ಚಿಲ್ಲರೆ ಮಾರಾಟ ಕೇಂದ್ರಗಳತ್ತ ವರ್ಗಾವಣೆಯಾಗಿದೆ, ಇದರಿಂದ ಪಂಪ್ಗಳಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದು ಸುಜಾತಾ ಶರ್ಮಾ ವಿವರಿಸಿದರು.
ಇದೇ ವೇಳೆ, ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ನಿರ್ದೇಶಕ ಒಪೇಶ್ ಕುಮಾರ್ ಶರ್ಮಾ ಮಾಹಿತಿ ನೀಡಿ, ‘ದಿಶಾ’ ಹೆಸರಿನ ಎಲ್ಎನ್ಜಿ ವಾಹಕ ಹಡಗು 62,370 ಮೆಟ್ರಿಕ್ ಟನ್ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಸಾಗಣೆಯೊಂದಿಗೆ ಹೋರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ ಎಂದು ತಿಳಿಸಿದರು. ಈ ಹಡಗು ಜೂನ್ 18ರಂದು ಗುಜರಾತಿನ ದಹೇಜ್ ಬಂದರನ್ನು ತಲುಪುವ ನಿರೀಕ್ಷೆಯಿದೆ ಎಂದರು.
ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ನಿರಂತರವಾಗಿ ನಿಗಾವಹಿಸಿದ್ದು, ವಿದೇಶಾಂಗ ಸಚಿವಾಲಯ, ಭಾರತೀಯ ರಾಯಭಾರಿ ಕಚೇರಿಗಳು, ಹಡಗು ಕಂಪನಿಗಳು ಹಾಗೂ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.