
ನವದೆಹಲಿ, 14 ಜೂನ್ (ಹಿ.ಸ.) :
ಆ್ಯಂಕರ್ : ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಕೇಂದ್ರ ಸಂಸದೀಯ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಕೇಂದ್ರ ಸಚಿವರು ರಕ್ತದಾತರಿಗೆ ಕೃತಜ್ಞತೆ ಸಲ್ಲಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡುವಂತೆ ಕರೆ ನೀಡಿದರು.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡ ಕಿರಣ್ ರಿಜಿಜು, “ಒಂದು ಯೂನಿಟ್ ರಕ್ತವು ಅಗತ್ಯವಿರುವ ವ್ಯಕ್ತಿಯ ಜೀವ ಮತ್ತು ಸಾವಿನ ನಡುವಿನ ಅಂತರವನ್ನು ನಿರ್ಧರಿಸಬಹುದು. ಹೆಚ್ಚಿನ ಜನರು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ಭಾಗಿಯಾಗುವಂತೆ ನಾವು ಪ್ರೇರೇಪಿಸೋಣ” ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು, “ರಕ್ತದಾನ ಮಾಡಿ, ಜೀವ ಉಳಿಸಿ. ವಿಶ್ವ ರಕ್ತದಾನಿಗಳ ದಿನದಂದು, ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಅಗತ್ಯವಿರುವವರಿಗೆ ಆಶಾಭಾವನೆ, ಆರೋಗ್ಯ ಮತ್ತು ಹೊಸ ಜೀವನದ ಅವಕಾಶ ನೀಡುತ್ತಿರುವ ಅಸಂಖ್ಯಾತ ಸ್ವಯಂಪ್ರೇರಿತ ರಕ್ತದಾತರಿಗೆ ನಾನು ಗೌರವ ಸಲ್ಲಿಸುತ್ತೇನೆ ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ತಿಳಿಸಿದ್ದಾರೆ.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, “ವಿಶ್ವ ರಕ್ತದಾನಿಗಳ ದಿನದ ಹಾರ್ದಿಕ ಶುಭಾಶಯಗಳು. ರಕ್ತದಾನವು ಮಹಾದಾನವಾಗಿದ್ದು, ರಕ್ತದಾತರು ಸಮಾಜ ಮತ್ತು ಮಾನವತೆಯ ಅಮೂಲ್ಯ ಸೇವಕರಾಗಿದ್ದಾರೆ. ಮಾನವ ಜೀವ ರಕ್ಷಣೆಗೆ ರಕ್ತದಾನದ ಮೂಲಕ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡುವ ಸಂಕಲ್ಪ ಮಾಡೋಣ” ಎಂದು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.