
ಬೆಂಗಳೂರು, 14 ಜೂನ್ (ಹಿ.ಸ.):
ಆ್ಯಂಕರ್:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ರಾಜ್ಯಮಟ್ಟದ ಕನ್ನಡ ಜಾಗೃತಿ ಸಮಾವೇಶ, ಕನ್ನಡ ಪರ ಹೋರಾಟಗಾರ ವ.ಚ. ಚನ್ನೇಗೌಡ ಅವರ ಅಭಿನಂದನಾ ಸಮಾರಂಭ ಹಾಗೂ “ನಾಡಹಣತೆಗಳು” ಕೃತಿ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಡಾ. ಹಿ.ಚಿ. ಬೋರಲಿಂಗಯ್ಯ, ಮನು ಬಳಿಗಾರ್, ವೂಡೆ ಪಿ. ಕೃಷ್ಣ, ರಾ.ನಂ. ಚಂದ್ರಶೇಖರ್, ವೀರಕಪುತ್ರ ಶ್ರೀನಿವಾಸ್, ಡಾ. ಪದ್ಮನಿ ನಾಗರಾಜು, ಕೆ.ಎಸ್. ಪ್ರಭುಸ್ವಾಮಿ ಹಾಗೂ ಕೆ.ಎಸ್.ಎ. ಹುಸೇನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ನಾಡೋಜ ಮನು ಬಳಿಗಾರ್, ಕನ್ನಡದ ಶುದ್ಧತೆ, ಹೃದಯ ವೈಶಾಲ್ಯ ಮತ್ತು ಕನ್ನಡ ಚಟುವಟಿಕೆಗಳ ಬಗ್ಗೆ ಅಪಾರ ಬದ್ಧತೆ ಹೊಂದಿರುವ ವ್ಯಕ್ತಿ ವ.ಚ. ಚನ್ನೇಗೌಡರು ಎಂದು ಶ್ಲಾಘಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ವೇಳೆ ಒಂದು ರೂಪಾಯಿ ಗೌರವಧನವನ್ನೂ ಸ್ವೀಕರಿಸದೆ ನಿಸ್ವಾರ್ಥ ಸೇವೆ ಸಲ್ಲಿಸಿರುವುದು ಅವರ ಕನ್ನಡಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಡಾ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ವ.ಚ. ಚನ್ನೇಗೌಡರು ರಾಜ್ಯ ಸಾರಿಗೆ ಸಂಸ್ಥೆಯಲ್ಲಿ 39 ವರ್ಷಗಳ ಸೇವೆಯೊಂದಿಗೆ ಕನ್ನಡ ಚಳುವಳಿಯಲ್ಲೂ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದರು. ಕನ್ನಡ ಭಾಷೆಯ ರಕ್ಷಣೆ ಮತ್ತು ಬೆಳವಣಿಗೆಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ವೂಡೆ ಪಿ. ಕೃಷ್ಣ ಅವರು, ವ.ಚ. ಚನ್ನೇಗೌಡರನ್ನು ಅಪ್ಪಟ ಗ್ರಾಮೀಣ ಪ್ರತಿಭೆಯೆಂದು ಬಣ್ಣಿಸಿ, ಬಾಲ್ಯದಿಂದಲೇ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ನಾಡು-ನುಡಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ಹೇಳಿದರು. ಕುವೆಂಪು ಅವರ “ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು” ಎಂಬ ಮಾತಿನಂತೆ ಚನ್ನೇಗೌಡರು ಕನ್ನಡ ಸೇವೆಯ ಕಲ್ಪವೃಕ್ಷವಾಗಿದ್ದಾರೆ ಎಂದು ಪ್ರಶಂಸಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವ.ಚ. ಚನ್ನೇಗೌಡರು, ಕನ್ನಡಕ್ಕಾಗಿ ತಾವು ಸಲ್ಲಿಸಿರುವುದು ಅಲ್ಪಸೇವೆಯಾದರೂ ಕನ್ನಡಿಗರಿಂದ ಅಪಾರ ಪ್ರೀತಿ ದೊರೆತಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಕನ್ನಡ ಪರ ಹೋರಾಟಗಾರರನ್ನು ಸರ್ಕಾರಗಳು ಸಮರ್ಪಕವಾಗಿ ಗುರುತಿಸಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಾರಿಗೆ ಸಂಸ್ಥೆಯ ನೌಕರರ ಸಮಸ್ಯೆಗಳಿಗೆ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು. ಸ್ಥಳೀಯ ಭೂಮಿಯನ್ನು ಪಡೆದು ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡದೇ ಹೊರರಾಜ್ಯದವರಿಗೆ ಆದ್ಯತೆ ನೀಡುತ್ತಿರುವುದನ್ನು ಖಂಡಿಸಿದ ಅವರು, ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ಅವರು, 4 ಸಾವಿರ ವಿದ್ಯುತ್ ಬಸ್‌ಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡದೆ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ನೀಡುವಂತೆ ಕೋರಿದರು. ಯುವಕರು ಕನ್ನಡ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯಾಧ್ಯಕ್ಷ ಕೆ.ಎಸ್. ಪ್ರಭುಸ್ವಾಮಿ ಮಾತನಾಡಿ, ಅನ್ಯಭಾಷೆಗಳ ಪ್ರಭಾವದ ನಡುವೆ ಕನ್ನಡದ ಚಿಂತನೆಗಳನ್ನು ಬಿತ್ತುವ ಉದ್ದೇಶದಿಂದ 1988ರಲ್ಲಿ ಕೇಂದ್ರ ಕನ್ನಡ ಕ್ರಿಯಾ ಸಮಿತಿಯನ್ನು ಸ್ಥಾಪಿಸಲಾಯಿತು ಎಂದರು. ಸಂಸ್ಥೆಯಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಹಾಗೂ ಆಡಳಿತದಲ್ಲಿ ಕನ್ನಡ ಬಳಕೆಗೆ ಹೋರಾಟ ನಡೆಸಿ ಗಮನಾರ್ಹ ಯಶಸ್ಸು ಸಾಧಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್.ಕೆ. ಸುರೇಶ್, ಶಿವಕುಮಾರ್ ಆರ್., ಎಸ್.ಜೆ. ಮೇಟಿ, ರಮೇಶ್, ಮಂಜುನಾಥ್, ರೇಖಾ ಮಾದರ್ ಸೇರಿದಂತೆ ಅನೇಕ ಕನ್ನಡ ಪರ ಹೋರಾಟಗಾರರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.