
ಗದಗ, 14 ಜೂನ್ (ಹಿ.ಸ.)
ಆ್ಯಂಕರ್:- ರಾಜ್ಯ ರಾಜಕಾರಣದ ಹಿರಿಯ ಮುತ್ಸದ್ದಿ, ಗದಗ ಜಿಲ್ಲೆಯ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಸಚಿವ ಸಂಪುಟದ ಎರಡನೇ ಪಟ್ಟಿಯಲ್ಲಿ ಸೇರಿಸಿ ತಕ್ಷಣ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ರಾಜ್ಯದ ನೂತನ ಮಂತ್ರಿಗಳಿಗೆ ಕ್ಷೌರಸೇವೆ ಬಹಿಷ್ಕರಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗದಗ ಜಿಲ್ಲಾ ಸವಿತಾ ಸಮಾಜ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡಗೆ ಎಚ್ಚರಿಕೆ ನೀಡಿದೆ.
ನಗರದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾದ ತುರ್ತು ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು, ಎಚ್.ಕೆ. ಪಾಟೀಲ್ ಅವರು ಹಲವು ದಶಕಗಳಿಂದ ಪ್ರಾಮಾಣಿಕತೆ, ನೈತಿಕತೆ ಹಾಗೂ ಜನಪರ ಆಡಳಿತದ ಮೂಲಕ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ನಾಯಕರು. ಇಂತಹ ಅನುಭವಿ ಹಾಗೂ ದೂರದೃಷ್ಟಿಯ ನಾಯಕನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದೇ ಇರುವುದು ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಎಚ್.ಕೆ. ಪಾಟೀಲ್ ಅವರು ಜನಪರ ಆಡಳಿತದ ಮಾದರಿಯನ್ನು ಸ್ಥಾಪಿಸಿದ್ದರು. ಇಂದಿಗೂ ರಾಜ್ಯದ ಅನೇಕ ಗ್ರಾಮಗಳಲ್ಲಿ ಅವರ ದೂರದೃಷ್ಟಿಯ ಯೋಜನೆಗಳು ಜನರಿಗೆ ಪ್ರಯೋಜನವಾಗುತ್ತಿವೆ. ಇಂತಹ ನಾಯಕನನ್ನು ಸಚಿವ ಸಂಪುಟದಿಂದ ಹೊರಗಿಡುವುದು ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದಂತಾಗುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಸಮಾಜದ ಹಿರಿಯ ಮುಖಂಡ ಹನುಮಂತಪ್ಪ ರಾಂಪೂರ ಅವರು, ಆಡಳಿತದಲ್ಲಿ ಅನುಭವ ಹೊಂದಿದ ನಾಯಕರ ಅಗತ್ಯತೆ ಇಂದು ಹೆಚ್ಚಾಗಿದೆ. ಸರ್ಕಾರಕ್ಕೆ ಎದುರಾಗುವ ಸಂಕೀರ್ಣ ಸವಾಲುಗಳು ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಎಚ್.ಕೆ. ಪಾಟೀಲ್ ಅವರಂತಹ ಅನುಭವಿ ನಾಯಕರ ಮಾರ್ಗದರ್ಶನ ಅಗತ್ಯವಾಗಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ಸದಾ ಧ್ವನಿಯಾಗಿರುವ ಅವರನ್ನು ಕಡೆಗಣಿಸಿದರೆ ಈ ಭಾಗದ ಜನರಲ್ಲಿ ಅಸಮಾಧಾನ ಭುಗಿಲೇಳುವುದು ಸಹಜ ಎಂದು ಹೇಳಿದರು.
ಗದಗ-ಬೆಟಗೇರಿ ಶಹರ ಘಟಕದ ಮರಾಠ ಕ್ಷೌರಿಕ ಸಮಾಜದ ಅಧ್ಯಕ್ಷ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಕಾಸ ಕ್ಷೀರಸಾಗರ ಹಾಗೂ ಜಿಲ್ಲಾ ಖಜಾಂಚಿ ಅರೂಣ ರಾಂಪೂರ ಮಾತನಾಡಿ, ಸರ್ಕಾರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವುದು ಸ್ವಾಗತಾರ್ಹವಾದರೂ ಹಿರಿಯ ನಾಯಕರ ಅನುಭವವನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ. ಹಿರಿಯ ನಾಯಕರ ಉಪಸ್ಥಿತಿ ಆಡಳಿತಕ್ಕೆ ಸ್ಥಿರತೆ ಮತ್ತು ಪಕ್ವತೆ ತರುತ್ತದೆ. ಎಚ್.ಕೆ. ಪಾಟೀಲ್ ಅವರು ಸವಿತಾ ಸಮಾಜ, ನಾಭಿಕ್ ಮರಾಠ ಸಮಾಜ ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದು, ಅವರ ರಾಜಕೀಯ ಅನುಭವ ರಾಜ್ಯಕ್ಕೆ ಅಮೂಲ್ಯವಾಗಿದೆ ಎಂದು ತಿಳಿಸಿದರು.
ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷ ಪರಶುರಾಮ ಎನ್. ಕೋಟೆಕಲ್ಲ, ಸಂತಸೇನಾ ಮಹಾರಾಜ್ ನಾಭಿಕ್ ಮರಾಠ (ಸವಿತಾ) ಸಮಾಜದ ಜಿಲ್ಲಾಧ್ಯಕ್ಷ ರಾಜು ಮಾನೆ, ಮುಖಂಡರಾದ ಎಲ್ಲಪ್ಪ ರಾಯಚೂರು ಹಾಗೂ ನರಸಿಂಹ ಗುರ್ಜಾಲಕರ್ ಮಾತನಾಡಿ, ಪ್ರಾಮಾಣಿಕ ರಾಜಕಾರಣಕ್ಕೆ ಮನ್ನಣೆ ನೀಡಿ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಸಮಾಜದ ನ್ಯಾಯಸಮ್ಮತ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಗದಗ ಜಿಲ್ಲೆಯಿಂದ ಆರಂಭವಾಗುವ ಹೋರಾಟ ರಾಜ್ಯಾದ್ಯಂತ ವಿಸ್ತರಿಸಲಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ಸಮಾಜದ ಮುಖಂಡರು, ರಾಜ್ಯದ ನೂತನ ಮಂತ್ರಿಗಳಿಗೆ ಕ್ಷೌರಸೇವೆ ಬಹಿಷ್ಕರಿಸುವ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸವಿತಾ ಸಮಾಜ ಹಾಗೂ ನಾಭಿಕ್ ಮರಾಠ ಸಮಾಜದ ಸದಸ್ಯರು ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾಗಲಿದ್ದು, ಸರ್ಕಾರದ ಗಮನ ಸೆಳೆಯಲು ವಿವಿಧ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸಮಾಜದ ಹಿರಿಯರಾದ ಪರಶುರಾಮ (ಬಜ್ಜು) ರಾಂಪೂರ, ಕೃಷ್ಣಾ ಬಾಯಲಗುಡ್ಡ, ಪಾಂಡು ಕಾಳೆ, ಜಂಬಣ್ಣ ಕಡಮೂರ, ಆಂಜನೇಯ ಆದೋನಿ, ಹೇಮಂತ ವಡ್ಡೆಪಲ್ಲಿ, ವೆಂಕಟೇಶ ಬಳ್ಳಾರಿ, ದೀಪಕ ಮಾನೆ, ಅಶೋಕ ಮಾನೆ, ಜ್ಞಾನೇಶ್ವರ ಕಾಳೆ, ಶಿವಾಜಿ ಮಾನೆ, ದತ್ತು ಮಾನೆ, ಜ್ಯೋತಿರಾಮ ಮಾನೆ, ವಸಂತ ಮಾನೆ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾನೆ, ಕಿರಣ ರಾಂಪೂರ, ಕುಮಾರ ಆದೋನಿ, ಪರಶುರಾಮ ಆದೋನಿ, ಸುಧೀರ ಮಾನೆ, ಮಾಧು ಮಾನೆ, ತುಕಾರಾಮ ಮಾನೆ ಹಾಗೂ ಯುವ ಮುಖಂಡರಾದ ಸುನೀಲ ರಾಯಚೂರು, ಮಂಜುನಾಥ ಆರ್. ಮಾನೆ, ಗಣೇಶ ಕಡಮೂರ, ಪ್ರಕಾಶ ಬೂದೂರ, ಸಾಗರ ಹಡಪದ, ವಿಕ್ರಂ ಕ್ಷೀರಸಾಗರ, ಕೃಷ್ಣಾ ಬೂದೂರ, ವಿಜಯ ಬೂದೂರ, ವಿನಾಯಕ ರಾಯಚೂರು, ಪ್ರೇಮ ರಾಂಪೂರ, ಪ್ರೇಮ ಬೂದೂರ, ಅಭಿನಾಶ ಆದೋನಿ, ಯಶವಂತ ಬೂದೂರ, ನಿಂಗರಾಜ ಕಡಮೂರ, ಅಕ್ಷಯ ಮಾನೆ ಸೇರಿದಂತೆ ನೂರಾರು ಸಮಾಜ ಬಾಂಧವರು ಸಭೆಯಲ್ಲಿ ಹಾಜರಿದ್ದರು.
ಸಭೆಯ ಅಂತ್ಯದಲ್ಲಿ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಾಗೂ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಯಿತು.
ಸಚಿವ ಸ್ಥಾನ ಕುರಿತಂತೆ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಜಿಲ್ಲೆಯ ಜನತೆ ಹಾಗೂ ವಿವಿಧ ಸಮುದಾಯಗಳು ಕುತೂಹಲದಿಂದ ಎದುರು ನೋಡುತ್ತಿರುವಂತಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP