ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಕೃಷಿಗೆ ಅಧಿಕಾರಿಗಳ ಕರೆ
ಗದಗ, 14 ಜೂನ್ (ಹಿ.ಸ.) ಆ್ಯಂಕರ್:- ಮಣ್ಣಿನ ಫಲವತ್ತತೆ ಕುಸಿತ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಹಾಗೂ ಕೃಷಿ ಉತ್ಪಾದನಾ ವೆಚ್ಚದ ಏರಿಕೆ ಇಂದಿನ ಕೃಷಿ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ. ಈ ಹಿನ್ನೆಲೆಯಲ್ಲಿಯೇ ರೈತರು ತಕ್ಷಣವೇ ಎಚ್ಚೆತ್ತುಕೊಂಡು ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧ
ಫೋಟೋ


ಗದಗ, 14 ಜೂನ್ (ಹಿ.ಸ.)

ಆ್ಯಂಕರ್:- ಮಣ್ಣಿನ ಫಲವತ್ತತೆ ಕುಸಿತ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಹಾಗೂ ಕೃಷಿ ಉತ್ಪಾದನಾ ವೆಚ್ಚದ ಏರಿಕೆ ಇಂದಿನ ಕೃಷಿ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ. ಈ ಹಿನ್ನೆಲೆಯಲ್ಲಿಯೇ ರೈತರು ತಕ್ಷಣವೇ ಎಚ್ಚೆತ್ತುಕೊಂಡು ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳತ್ತ ಮುಖಮಾಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಸಲಹೆ ನೀಡಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಮಹತ್ವದ ‘ಭೂಮಿ ಬಚಾವೋ’ ಹಾಗೂ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಚೇತನಾ ಪಾಟೀಲ ಅವರು, ಇತ್ತೀಚಿನ ವರ್ಷಗಳಲ್ಲಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಗಣನೀಯವಾಗಿ ಹೆಚ್ಚಾಗಿರುವುದು ಮಣ್ಣಿನ ಜೀವಸತ್ವ ಮತ್ತು ಸೂಕ್ಷ್ಮಜೀವಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದರ ಪರಿಣಾಮವಾಗಿ ಭೂಮಿಯ ಸ್ವಾಭಾವಿಕ ಫಲವತ್ತತೆ ಕಡಿಮೆಯಾಗುತ್ತಿದ್ದು, ದೀರ್ಘಾವಧಿಯಲ್ಲಿ ಕೃಷಿ ಉತ್ಪಾದನೆಗೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

ರೈತರು ಕೇವಲ ಉತ್ಪಾದನೆಯತ್ತ ಮಾತ್ರ ಗಮನ ಹರಿಸದೆ, ಭೂಮಿಯ ಆರೋಗ್ಯ ಕಾಪಾಡುವುದಕ್ಕೂ ಸಮಾನ ಮಹತ್ವ ನೀಡಬೇಕು ಎಂದು ಅವರು ತಿಳಿಸಿದರು. “ಪ್ರತಿ ರೈತನು ತನ್ನ ಜಮೀನಿನ ಕನಿಷ್ಠ ಒಂದು ಭಾಗವನ್ನಾದರೂ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಮೀಸಲಿಟ್ಟು ಪ್ರಯೋಗಾತ್ಮಕವಾಗಿ ಬೆಳೆ ಬೆಳೆಯಬೇಕು. ಇದು ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ಉಳಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗುತ್ತದೆ” ಎಂದು ಅವರು ಹೇಳಿದರು.

ದ್ವಿದಳ ಧಾನ್ಯಗಳ ಮಹತ್ವವನ್ನು ಉಲ್ಲೇಖಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಸರು, ತೊಗರಿ, ಉದ್ದು ಸೇರಿದಂತೆ ದ್ವಿದಳ ಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ ಎಂದು ಹೇಳಿದರು. ಇಂತಹ ಬೆಳೆಗೆ ಆದ್ಯತೆ ನೀಡುವುದರಿಂದ ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ ಮಾತ್ರವಲ್ಲ, ಪೌಷ್ಟಿಕಾಂಶದ ಕೊರತೆಯನ್ನು ಕಡಿಮೆ ಮಾಡುವಲ್ಲಿಯೂ ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅದೇ ರೀತಿ, ಪ್ರತಿ ವರ್ಷ ನಿಯಮಿತವಾಗಿ ಮಣ್ಣಿನ ಪರೀಕ್ಷೆ ಮಾಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದ ಚೇತನಾ ಪಾಟೀಲ ಅವರು, ಮಣ್ಣಿನ ಪರೀಕ್ಷಾ ವರದಿ ಆಧರಿಸಿ ಗೊಬ್ಬರ ಬಳಕೆ ಹಾಗೂ ಬೆಳೆ ಆಯ್ಕೆ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಕಾಲದ ಅಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕಿ ಜಿ.ಎಸ್. ಸ್ಫೂರ್ತಿ ಮಾತನಾಡಿ, ರೈತರು ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು. ಸಮತೋಲಿತ ಗೊಬ್ಬರ ಬಳಕೆ, ಜೈವಿಕ ಗೊಬ್ಬರಗಳ ಉಪಯೋಗ ಹಾಗೂ ಮಣ್ಣಿನ ಸಂರಕ್ಷಣೆ ಕುರಿತು ರೈತರಿಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಇಷ್ಟೋ ಕಂಪನಿಯ ಕ್ಷೇತ್ರ ಅಧಿಕಾರಿ ಯಕ್ಷಿತ್ ಡಿ.ಎಸ್., ಕೃಷಿ ವಿಜ್ಞಾನಿಗಳಾದ ಚೇತನ್ ಬಾಬು, ವಿನಾಯಕ ನಿರಂಜನ ಹಾಗೂ ಸುಧಾ ಮಂಕಣಿ ಅವರು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ಮಣ್ಣಿನ ಆರೋಗ್ಯ ನಿರ್ವಹಣೆ, ನೀರಿನ ಸಮರ್ಪಕ ಬಳಕೆ ಹಾಗೂ ಸುಸ್ಥಿರ ಕೃಷಿ ವಿಧಾನಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಬಸವರಾಜ ಇಟಗಿ, ಶಂಕ್ರಣ್ಣ ಶಿರನಹಳ್ಳಿ, ಶಶಿಕಲಾ ಸಾಸಲವಾಡ, ಪ್ರಕಾಶ ಕಳ್ಳಿಹಾಳ, ಚನ್ನಪ್ಪ ಶಿರನಹಳ್ಳಿ, ಚಂದ್ರಶೇಖರ ಮೂಲಿಮನಿ ಸೇರಿದಂತೆ ಅನೇಕ ಕೃಷಿ ಅಧಿಕಾರಿಗಳು ಹಾಗೂ ನೂರಾರು ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಗ್ರಾಮೀಣ ಮಟ್ಟದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ರೈತರಲ್ಲಿ ಹೊಸ ಚಿಂತನೆ ಮೂಡಿಸುವುದರ ಜೊತೆಗೆ ಸುಸ್ಥಿರ ಕೃಷಿಯತ್ತ ಹೆಜ್ಜೆ ಹಾಕಲು ಪ್ರೇರಣೆ ನೀಡುತ್ತಿವೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande