
ಗದಗ, 14 ಜೂನ್ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆ ರೋಣ ತಾಲೂಕಿನ ಯಾ.ಸ. ಹಡಗಲಿ ಗ್ರಾಮದ ಶ್ರೀ ಸಾಧು ವೀರಪ್ಪಜ್ಜನ ಮಠದ ಆಶ್ರಯದಲ್ಲಿ ಪೂಜ್ಯ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರು ಲೋಕ ಕಲ್ಯಾಣಾರ್ಥವಾಗಿ ಕೈಗೊಂಡಿದ್ದ 21 ದಿನಗಳ ಮೌನ ಅನುಷ್ಠಾನ ಕಾರ್ಯಕ್ರಮದ ಮಹಾಮಂಗಲ ಸಮಾರೋಪ ಸಮಾರಂಭವು ಜೂನ್ 16ರಂದು ಮಂಗಳವಾರ ಭಕ್ತಿಭಾವ ಹಾಗೂ ಧಾರ್ಮಿಕ ವೈಭವದೊಂದಿಗೆ ನಡೆಯಲಿದೆ.
ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರು ಕಳೆದ 15 ವರ್ಷಗಳಿಂದ ನಿರಂತರವಾಗಿ ಮೌನ ಅನುಷ್ಠಾನ ನಡೆಸುತ್ತಿದ್ದು, ಈ ವರ್ಷದ 21 ದಿನಗಳ ತಪೋಮಯ ಮೌನ ಸಾಧನೆಯ ಮುಕ್ತಾಯದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂಜಾನೆ 8.30 ಗಂಟೆಗೆ ಯಾ.ಸ. ಹಡಗಲಿ ಗ್ರಾಮದ ಶ್ರೀ ಕಛೇಶ್ವರ ರಂಗಮಂದಿರದಲ್ಲಿ ಮಹಾಮಂಗಲ ಕಾರ್ಯಕ್ರಮ ಜರುಗಲಿದ್ದು, ನಾಡಿನ ವಿವಿಧ ಮಠಾಧೀಶರು, ಸಂತರು ಹಾಗೂ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನವಲಗುಂದದ ಗವಿಮಠದ ಶ್ರೀ ಮ.ಘ.ಚ. ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ಚಿಕ್ಕುಂಬಿಯ ಸುಕ್ಷೇತ್ರ ನಾಗಲಿಂಗೇಶ್ವರ ಮಠದ ಪ.ಬ್ರ. ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳು, ಗದಗದ ವಿರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು ಹಾಗೂ ಮುರನಾಳ-ಯಾವಗಲ್ಲದ ಮಹಾಪುರುಷ ಜಗದ್ಗುರು ಶ್ರೀ ಮಳೆರಾಜೇಂದ್ರ ಸ್ವಾಮಿಮಠದ ಪ.ಪೂ. ಶ್ರೀ ಮೇಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಗದಗದ ಕದಳಿವನ ಮಠದ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರು ಹಾಗೂ ಆಮ್ಮಿನಗಡ್ಡಿಯ ಚೋಳಚಗುಡ್ಡ ವೇದಾಶ್ರಮದ ಮಾತೋಶ್ರೀ ಪಾರ್ವತಿ ಪರಮೇಶ್ವರ ತಾಯಿಯವರು ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಲಿದ್ದಾರೆ. ತಿರೋಳ ಗ್ರಾಮದ ಶ್ರೀ ಬಾಪುಗೌಡ ತಿಮ್ಮನಗೌಡ್ರ ಹಾಗೂ ಶಿರೋಳದ ಶಿಕ್ಷಕರಾದ ಶ್ರೀ ಪ್ರಭಾಕರ ಉಳ್ಳಾಗಡ್ಡಿ ಅವರು ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಗೀತ ಸೇವೆಯನ್ನು ಖ್ಯಾತ ಗಾಯಕ ಶ್ರೀ ಬಸವರಾಜ ಹಿರೇಕೊಪ್ಪ ಅವರು ನೀಡಲಿದ್ದು, ತಬಲಾ ಸಹಕಾರವನ್ನು ಶ್ರೀ ವೀರಬಸಪ್ಪ ವಿ. ಅಂದಾನಪ್ಪನವರ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಯಾ.ಸ. ಹಡಗಲಿ ಗ್ರಾಮದ ಅಕ್ಕನ ಬಳಗದ ವತಿಯಿಂದ ಪೂಜ್ಯ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರಿಗೆ ವಿಶೇಷ ತುಲಾಭಾರ ಸೇವೆಯನ್ನು ಆಯೋಜಿಸಿರುವುದು ವಿಶೇಷ ಆಕರ್ಷಣೆಯಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿಗೀತೆಗಳು ಹಾಗೂ ಭಜನಾ ಸೇವೆಗಳು ನಡೆಯಲಿವೆ. ಕರಡಿ ಮಜಲಿನ ಶ್ರೀ ನಂದಿ ಪ್ರಸಾದೀಕ ಭಜನಾ ಮಂಡಳಿ, ಬೆಳವಣಕಿಯ ಶ್ರೀ ನಂದಿಬಸವೇಶ್ವರ ಭಜನಾ ಸಂಘ, ಮಲ್ಲಾಪುರದ ಶ್ರೀ ವೀರಭದ್ರೇಶ್ವರ ಭಜನಾ ಮಂಡಳಿ, ಯಾವಗಲ್ಲದ ಶ್ರೀ ಲಕ್ಷ್ಮೀದೇವಿ ಭಜನಾ ಮಂಡಳಿ ಸೇರಿದಂತೆ ಹಲವು ಭಜನಾ ತಂಡಗಳು ಭಾಗವಹಿಸಿ ಭಕ್ತಿರಸವನ್ನು ಉಣಬಡಿಸಲಿವೆ. ಜೊತೆಗೆ ಶ್ರೀ ಕಲ್ಲೇಶ್ವರ, ಶ್ರೀ ಶರಣಬಸವೇಶ್ವರ, ಶ್ರೀ ಮಾರುತೇಶ್ವರ ಭಜನಾ ಮಂಡಳಿಗಳು ಹಾಗೂ ಯಾ.ಸ. ಹಡಗಲಿಯ ಶ್ರೀ ವೀರಕಳಸೇಶ್ವರ ಡೊಳ್ಳಿನ ಮೇಳವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿವೆ.
ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಮೌನ ಅನುಷ್ಠಾನ ನಡೆಸುತ್ತಿರುವ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರ ತಪಸ್ಸು, ಆಧ್ಯಾತ್ಮಿಕ ಸಾಧನೆ ಹಾಗೂ ಸಮಾಜಮುಖಿ ಸೇವೆಗಳಿಗೆ ಭಕ್ತವೃಂದದಲ್ಲಿ ಅಪಾರ ಗೌರವವಿದ್ದು, ಈ ಮಹಾಮಂಗಲ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳ ಆಶೀರ್ವಾದ ಪಡೆಯುವಂತೆ ಯಾ.ಸ. ಹಡಗಲಿ ಗ್ರಾಮದ ಗುರು-ಹಿರಿಯರು ಹಾಗೂ ಸದ್ಭಕ್ತ ಮಂಡಳಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP