
ನವದೆಹಲಿ, 14 ಜೂನ್ (ಹಿ.ಸ.):
ಆ್ಯಂಕರ್:
ಕಳೆದ 12 ವರ್ಷಗಳಲ್ಲಿ ದೇಶದ ಮೂಲಸೌಕರ್ಯ ಅಭಿವೃದ್ಧಿ ಮತ್ತು ರಾಷ್ಟ್ರೀಯ ಹೆದ್ದಾರಿ ಜಾಲದ ವಿಸ್ತರಣೆಯಲ್ಲಿ ಐತಿಹಾಸಿಕ ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. 2014ರಲ್ಲಿ ಸುಮಾರು 91,287 ಕಿಲೋಮೀಟರ್ ಇದ್ದ ರಾಷ್ಟ್ರೀಯ ಹೆದ್ದಾರಿ ಜಾಲವು 2025-26ನೇ ಹಣಕಾಸು ವರ್ಷದಲ್ಲಿ 61 ಶೇಕಡಾ ಹೆಚ್ಚಳಗೊಂಡು 1,46,572 ಕಿಲೋಮೀಟರ್‌ಗಿಂತ ಅಧಿಕವಾಗಿದೆ.
ಸಚಿವಾಲಯದ ಪ್ರಕಾರ, ರಾಷ್ಟ್ರೀಯ ಹೆದ್ದಾರಿಗಳ ವೇಗದ ವಿಸ್ತರಣೆ ಹಾಗೂ ವಿಶ್ವಮಟ್ಟದ ರಸ್ತೆ ಮೂಲಸೌಕರ್ಯವು ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ಚೈತನ್ಯ ನೀಡಿದ್ದು, ಸರಕು ಸಾಗಣೆ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ.
2013-14ರಲ್ಲಿ ದೇಶದಲ್ಲಿ ರಸ್ತೆ ನಿರ್ಮಾಣದ ಸರಾಸರಿ ವೇಗ ದಿನಕ್ಕೆ 11.6 ಕಿಲೋಮೀಟರ್ ಆಗಿದ್ದರೆ, 2025ರ ವೇಳೆಗೆ ಅದು ದಿನಕ್ಕೆ ಸುಮಾರು 34 ಕಿಲೋಮೀಟರ್‌ಗೆ ಏರಿಕೆಯಾಗಿದೆ. ಇದು ರಸ್ತೆ ನಿರ್ಮಾಣ ಕ್ಷೇತ್ರದಲ್ಲಿ ಸರ್ಕಾರ ಸಾಧಿಸಿರುವ ಮಹತ್ವದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.
ಐಐಎಂ ಬೆಂಗಳೂರು ನಡೆಸಿದ ಅಧ್ಯಯನದ ಪ್ರಕಾರ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಿಂದ ಕೈಗಾರಿಕೆಗಳು ಮತ್ತು ಉತ್ಪಾದನಾ ಕೇಂದ್ರಗಳಿಗೆ ಸುಲಭ ಸಂಪರ್ಕ ಲಭಿಸಿದ್ದು, ಸಾರಿಗೆ ವೆಚ್ಚದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದರಿಂದ ಕೈಗಾರಿಕಾ ಚಟುವಟಿಕೆಗಳು ಹಾಗೂ ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ದೊರೆತಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಭಾರತಮಾಲಾ ಯೋಜನೆ ಅಡಿಯಲ್ಲಿ 34,800 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. 2026ರ ಮಾರ್ಚ್ ವೇಳೆಗೆ 22,590 ಕಿಲೋಮೀಟರ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದ ಅತಿ ಉದ್ದದ ನಿಯಂತ್ರಿತ ಪ್ರವೇಶದ ಹೆದ್ದಾರಿಯಾಗಲಿರುವ 1,386 ಕಿಲೋಮೀಟರ್ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕ ದೇಶದ ರಸ್ತೆ ಸಂಪರ್ಕ ವ್ಯವಸ್ಥೆಗೆ ಹೊಸ ಆಯಾಮ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜೂನ್ 5ರಂದು ಗುಜರಾತ್‌ನ ಕಿಮ್-ಏನಾ (36 ಕಿ.ಮೀ) ಹಾಗೂ ಗಂದೇವಾ-ಏನಾ (27.5 ಕಿ.ಮೀ) ವಿಭಾಗಗಳನ್ನು ಉದ್ಘಾಟಿಸಿದ್ದಾರೆ.
ಇದಲ್ಲದೆ, ಸುಮಾರು 82 ಕಿಲೋಮೀಟರ್ ಉದ್ದದ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದು, ಉತ್ತರ ಭಾರತದ ಪ್ರಮುಖ ಸಾರಿಗೆ ಮಾರ್ಗವಾಗಿ ರೂಪುಗೊಂಡಿದೆ.
ದ್ವಾರಕಾ ಎಕ್ಸ್‌ಪ್ರೆಸ್‌ವೇಯ ದೆಹಲಿ ವಿಭಾಗವನ್ನು 2025ರ ಆಗಸ್ಟ್‌ನಲ್ಲಿ ಹಾಗೂ ಹರಿಯಾಣ ವಿಭಾಗವನ್ನು 2024ರ ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ದಕ್ಷಿಣ ಭಾರತದಲ್ಲಿಯೂ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 118 ಕಿಲೋಮೀಟರ್ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮೂಲಕ ಪ್ರಯಾಣದ ಅವಧಿ ಮೂರು ಗಂಟೆಗಳಿಂದ ಕೇವಲ 75 ನಿಮಿಷಗಳಿಗೆ ಇಳಿಕೆಯಾಗಿದೆ.
ಇದರ ಜೊತೆಗೆ, 12,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 213 ಕಿಲೋಮೀಟರ್ ಉದ್ದದ ದೆಹಲಿ-ದೆಹ್ರಾದೂನ್ ಆರ್ಥಿಕ ಕಾರಿಡಾರ್ ಅನ್ನು 2026ರ ಏಪ್ರಿಲ್ 14ರಂದು ಉದ್ಘಾಟಿಸಲಾಗಿದೆ. ಈ ಯೋಜನೆಯಲ್ಲಿ ರಾಜಾಜಿ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ಪ್ರದೇಶವನ್ನು ಸಂರಕ್ಷಿಸಲು 12 ಕಿಲೋಮೀಟರ್ ಉದ್ದದ ಏಷ್ಯಾದ ಅತಿ ಉದ್ದದ ಎಲಿವೇಟೆಡ್ ವನ್ಯಜೀವಿ ಕಾರಿಡಾರ್ ನಿರ್ಮಿಸಲಾಗಿದೆ.
ದೇಶದ ರಸ್ತೆ ಮತ್ತು ಹೆದ್ದಾರಿ ಕ್ಷೇತ್ರದಲ್ಲಿ ಕಳೆದ ಒಂದು ದಶಕದಲ್ಲಿ ನಡೆದ ವೇಗದ ಅಭಿವೃದ್ಧಿಯು ಆರ್ಥಿಕ ಬೆಳವಣಿಗೆ, ಕೈಗಾರಿಕಾ ವಿಸ್ತರಣೆ ಮತ್ತು ಸುಗಮ ಸಂಪರ್ಕ ವ್ಯವಸ್ಥೆಗೆ ಪ್ರಮುಖ ಆಧಾರವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.