
ನವದೆಹಲಿ, 14 ಜೂನ್ (ಹಿ.ಸ.):
ಆ್ಯಂಕರ್:
ಫ್ರಾನ್ಸ್ನ ನೀಸ್ ನಗರದಲ್ಲಿ ಆಯೋಜಿಸಲಾದ ‘ಭಾರತ್ ಇನ್ನೋವೇಟ್ಸ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಸಹಭಾಗಿತ್ವವು ಹಂಚಿಕೊಂಡ ದೃಷ್ಟಿಕೋನ, ನವೋದ್ಯಮ ಮತ್ತು ಪರಸ್ಪರ ವಿಶ್ವಾಸದ ಮೇಲೆ ನಿರ್ಮಾಣಗೊಂಡಿದೆ ಎಂದು ಹೇಳಿದರು. ಈ ವೇದಿಕೆ ಭಾರತೀಯ ಪ್ರತಿಭೆ ಮತ್ತು ಯುರೋಪಿಯನ್ ಬಂಡವಾಳದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ, ಭಾರತೀಯ ನವೋದ್ಯಮಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅವರು ಪ್ರಮುಖ ಹೂಡಿಕೆದಾರರು ಹಾಗೂ ಸಾಹಸೋದ್ಯಮ ಬಂಡವಾಳ ಹೂಡಿಕೆ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಗತ್ತಿನ ರಾಷ್ಟ್ರಗಳು ವ್ಯಾಪಾರ ಮತ್ತು ಕಾರ್ಯತಂತ್ರದ ಸಹಭಾಗಿತ್ವಗಳನ್ನು ರೂಪಿಸಿಕೊಳ್ಳುತ್ತವೆ. ಆದರೆ ಕೆಲವು ಸಂಬಂಧಗಳು ಕೇವಲ ಪರಸ್ಪರ ಹಿತಾಸಕ್ತಿಗಳಿಗೆ ಸೀಮಿತವಾಗಿರುವುದಿಲ್ಲ. ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧವೂ ಅಂತಹ ವಿಶಿಷ್ಟ ಬಾಂಧವ್ಯವಾಗಿದ್ದು, ಅದು ಹಂಚಿಕೊಂಡ ದೃಷ್ಟಿಕೋನ, ಪರಸ್ಪರ ನಂಬಿಕೆ, ನವೀನತೆ, ಪ್ರೇರಣೆ ಮತ್ತು ಸಾಮಾನ್ಯ ಮೌಲ್ಯಗಳ ಮೇಲೆ ನಿಂತಿದೆ ಎಂದು ಹೇಳಿದರು.
ಇದೇ ಆಧಾರದ ಮೇಲೆ ಕಳೆದ ಕೆಲವು ವರ್ಷಗಳಲ್ಲಿ ಉಭಯ ರಾಷ್ಟ್ರಗಳು ಹಲವು ಹೊಸ ಉಪಕ್ರಮಗಳನ್ನು ಆರಂಭಿಸಿವೆ. ‘ಭಾರತ್ ಇನ್ನೋವೇಟ್ಸ್’ ಕಾರ್ಯಕ್ರಮವೂ ಆ ದಿಕ್ಕಿನಲ್ಲಿನ ಮಹತ್ವದ ಹೆಜ್ಜೆಯಾಗಿದ್ದು, ಭಾರತೀಯ ಯುವ ಪ್ರತಿಭೆಗಳಿಗೆ ಯುರೋಪಿನ ಪರಿಣತಿ ಮತ್ತು ಬಂಡವಾಳದೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ಒದಗಿಸುತ್ತಿದೆ ಎಂದು ಅವರು ತಿಳಿಸಿದರು.
ಭಾರತವು 21ನೇ ಶತಮಾನದಲ್ಲಿ ಮಹತ್ವದ ಪರಿವರ್ತನೆಯ ಹಾದಿಯಲ್ಲಿದ್ದು, ದೇಶದಲ್ಲಿ ನವೋದ್ಯಮ ಸಂಸ್ಥೆಗಳ ಕ್ರಾಂತಿ ನಡೆಯುತ್ತಿದೆ. ಭಾರತೀಯ ಯುವಜನತೆ ಹೊಸ ದೃಷ್ಟಿಕೋನದೊಂದಿಗೆ ಮಾನವಕುಲದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಮುಂದಾಗುತ್ತಿದೆ. ‘ಭಾರತ್ ಇನ್ನೋವೇಟ್ಸ್’ ಅಂತಹ ವಿಶ್ವಮಟ್ಟದ ಪರಿಹಾರಗಳನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ವೇದಿಕೆಯಾಗಿದೆ ಎಂದು ಮೋದಿ ಹೇಳಿದರು.
ಭಾರತ ಇಂದು ಕೇವಲ ತಂತ್ರಜ್ಞಾನ ಮತ್ತು ಪರಿಹಾರಗಳ ಬಳಕೆದಾರ ರಾಷ್ಟ್ರವಲ್ಲ; ಜಗತ್ತಿಗೆ ಪರಿಹಾರಗಳನ್ನು ಒದಗಿಸುವ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ತಂತ್ರಜ್ಞಾನ ಪೂರೈಕೆದಾರ ದೇಶವಾಗಿ ಭಾರತ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಉದ್ಯಮಿಗಳ ಸಾಧನೆಯನ್ನು ಶ್ಲಾಘಿಸಿದ ಮೋದಿ, ಅವರಲ್ಲಿ ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ಕೂಡಿದ ಹೊಸ ಭಾರತದ ಚಿತ್ರಣ ಕಾಣುತ್ತಿದೆ ಎಂದರು. ಕೆಲವರು ಕೃತಕ ಬುದ್ಧಿಮತ್ತೆಯ ನೆರವಿನಿಂದ ಗ್ರಾಮೀಣ ಭಾರತದ ಬದುಕಿನಲ್ಲಿ ಬದಲಾವಣೆ ತರುತ್ತಿದ್ದರೆ, ಇನ್ನೂ ಕೆಲವರು ಉಪಗ್ರಹ ತಂತ್ರಜ್ಞಾನದ ಮೂಲಕ ರೈತರಿಗೆ ನೆರವಾಗುತ್ತಿದ್ದಾರೆ ಎಂದು ಹೇಳಿದರು.
ಮಾನವಕುಲದ ಸೇವೆಗೆ ನೆರವಾಗುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಭಾರತದ ಗುರಿಯಾಗಿದೆ. ದೇಶದ ಡಿಜಿಟಲ್ ಕ್ರಾಂತಿ ಹಾಗೂ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವೂ ಇದೇ ಚಿಂತನೆಯ ಫಲವಾಗಿದೆ. ಭಾರತದ ಕೃತಕ ಬುದ್ಧಿಮತ್ತೆ ನೀತಿಯು ‘ಎಲ್ಲರಿಗಾಗಿ ಕೃತಕ ಬುದ್ಧಿಮತ್ತೆ’ ಎಂಬ ತತ್ವದ ಮೇಲೆ ಆಧಾರಿತವಾಗಿದ್ದು, ಪ್ರತಿಯೊಬ್ಬರ ಕಲ್ಯಾಣ ಮತ್ತು ಜೀವನಮಟ್ಟ ಸುಧಾರಣೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಹೇಳಿದರು.
ಈ ವರ್ಷ ಭಾರತ–ಫ್ರಾನ್ಸ್ ನವೋದ್ಯಮ ವರ್ಷದ ಆರಂಭವಾಗಿರುವುದನ್ನು ಉಲ್ಲೇಖಿಸಿದ ಮೋದಿ, ‘ಭಾರತ್ ಇನ್ನೋವೇಟ್ಸ್’ ಕಾರ್ಯಕ್ರಮವನ್ನು ಫ್ರಾನ್ಸ್ನೊಂದಿಗೆ ಆರಂಭಿಸಿರುವುದಕ್ಕೆ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತ ಮತ್ತು ಫ್ರಾನ್ಸ್ ನಡುವಿನ ನವೋದ್ಯಮ ಸಹಕಾರವು ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದ ಹೊಸ ಅವಕಾಶಗಳು ಮತ್ತು ತಾಂತ್ರಿಕ ಪರಿಹಾರಗಳಿಗೆ ದಾರಿ ಮಾಡಿಕೊಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.