ಗೃಹ ಇಲಾಖೆ ಎಚ್ಚೆತ್ತುಕೊಳ್ಳಬೇಕು : ಮಾಜಿ ಮಂತ್ರಿ ಸಿ.ಸಿ. ಪಾಟೀಲ್
ಗದಗ, 14 ಜೂನ್ (ಹಿ.ಸ.) : ಆ್ಯಂಕರ್ : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಮಾದಕ ದ್ರವ್ಯ ದಂಧೆ ಪ್ರಕರಣದ ಕುರಿತು ಮಾಜಿ ಮಂತ್ರಿ ಹಾಗೂ ಗದಗ ಶಾಸಕ ಸಿ.ಸಿ. ಪಾಟೀಲ್ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕಾನೂನು ಸುವ್ಯವಸ್
ಫೋಟೋ


ಗದಗ, 14 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಮಾದಕ ದ್ರವ್ಯ ದಂಧೆ ಪ್ರಕರಣದ ಕುರಿತು ಮಾಜಿ ಮಂತ್ರಿ ಹಾಗೂ ಗದಗ ಶಾಸಕ ಸಿ.ಸಿ. ಪಾಟೀಲ್ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಇಲಾಖೆಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಕೂಗಳತೆಯ ದೂರದಲ್ಲೇ ಮಾದಕ ದಂಧೆ ಪತ್ತೆಯಾಗಿರುವುದು ಸರ್ಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

“ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿಯೇ ಇಂತಹ ಘಟನೆಗಳು ನಡೆಯುತ್ತಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯ ಸ್ಥಿತಿಗತಿಯನ್ನು ಬಿಂಬಿಸುತ್ತದೆ. ಮಾದಕ ದ್ರವ್ಯಗಳ ಜಾಲ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಯುವಜನತೆಯ ಭವಿಷ್ಯಕ್ಕೆ ಇದು ಗಂಭೀರ ಅಪಾಯವಾಗಿದೆ” ಎಂದು ಹೇಳಿದರು.

ಅಬಕಾರಿ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ ಸಿ.ಸಿ. ಪಾಟೀಲ್, ಇಲಾಖೆಗೆ ನೀಡಲಾಗುತ್ತಿರುವ ಗುರಿ (ಟಾರ್ಗೆಟ್) ಪದ್ಧತಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. “ಅಬಕಾರಿ ಇಲಾಖೆಗೆ ಆದಾಯ ಸಂಗ್ರಹಣೆಯ ಗುರಿ ನಿಗದಿಪಡಿಸುವುದರಿಂದ ಗ್ರಾಮೀಣ ಭಾಗಗಳಲ್ಲಿ ಕಿರಾಣಿ ಅಂಗಡಿಗಳು, ಹೋಟೆಲ್ಗಳು ಹಾಗೂ ಇತರೆ ಕಡೆಗಳಲ್ಲಿ ಮದ್ಯ ಮಾರಾಟಕ್ಕೆ ಪರೋಕ್ಷ ಉತ್ತೇಜನ ಸಿಗುತ್ತಿದೆ. ಸರ್ಕಾರ ಮೊದಲು ಈ ಗುರಿ ನಿಗದಿ ಮಾಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು” ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ ಅವರು, “ಹೊಸ ಸರ್ಕಾರಕ್ಕೆ ನಾವು ಸ್ವಲ್ಪ ಸಮಯ ನೀಡಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಸರ್ಕಾರದ ಕಾರ್ಯಕ್ಷಮತೆಯನ್ನು ಜನತೆ ಮೌಲ್ಯಮಾಪನ ಮಾಡಲಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಹೇಳಿದರು.

ಗೃಹ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ಸಿ.ಸಿ. ಪಾಟೀಲ್, “ರಾಜ್ಯದಲ್ಲಿ ಅನೇಕ ಗೃಹ ಸಚಿವರನ್ನು, ಹಿರಿಯ ನಾಯಕರನ್ನು ಹಾಗೂ ಪ್ರಧಾನಿಗಳನ್ನು ನೋಡಿದ್ದೇವೆ. ಗೃಹ ಸಚಿವರು ತಮ್ಮ ಇಲಾಖೆಯತ್ತ ಹೆಚ್ಚಿನ ಗಮನ ಹರಿಸಬೇಕು. ಕಾನೂನು ಸುವ್ಯವಸ್ಥೆ, ಅಕ್ರಮ ಚಟುವಟಿಕೆಗಳು, ಓಸಿ ಹಾಗೂ ಇಸ್ಪೀಟು ದಂಧೆಗಳು ಹಲವೆಡೆ ನಿರಂತರವಾಗಿ ನಡೆಯುತ್ತಿವೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಟೀಕಿಸಿದರು.

ರಾಜ್ಯದ ಶಾಲೆ ಹಾಗೂ ಕಾಲೇಜುಗಳ ಆವರಣಗಳಲ್ಲಿಯೂ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, “ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ಮಾದಕ ವಸ್ತುಗಳ ಮಾರಾಟವನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಪೊಲೀಸ್ ನಿಗಾವನ್ನು ಹೆಚ್ಚಿಸಿ, ಮಾದಕ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು” ಎಂದು ಒತ್ತಾಯಿಸಿದರು.

ಮಾದಕ ದ್ರವ್ಯಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಇತರ ಸಂಬಂಧಿತ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕೆಂದು ಅವರು ಸಲಹೆ ನೀಡಿದರು. ಯುವಜನರನ್ನು ಮಾದಕ ವ್ಯಸನದಿಂದ ರಕ್ಷಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳು ಮತ್ತು ಮಾದಕ ದ್ರವ್ಯ ದಂಧೆ ವಿರುದ್ಧ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಜನರ ಸುರಕ್ಷತೆ ಮತ್ತು ಯುವಜನರ ಭವಿಷ್ಯ ರಕ್ಷಣೆಗಾಗಿ ಗೃಹ ಇಲಾಖೆ ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande