
ಬೆಂಗಳೂರು, 14 ಜೂನ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ತಮ್ಮ ಹೇಳಿಕೆಯಲ್ಲಿ, ಧರ್ಮಸ್ಥಳದ ವಿಷಯದಲ್ಲಿ ಹಿಂದೆ ಸುಳ್ಳು ಆರೋಪಗಳಿಗೆ ಬೆಂಬಲ ನೀಡಿದ್ದ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು ಎಂದಿರುವ ಅಶೋಕ್, ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲು ಸುಮಾರು 200 ಕೋಟಿ ರೂಪಾಯಿಗಳ ಹಣಕಾಸಿನ ಪಿತೂರಿ ನಡೆದಿದೆ ಎಂಬ ಗಂಭೀರ ಆರೋಪವು ಆರೋಪಿಯೊಬ್ಬನ ಹೇಳಿಕೆಯಿಂದಲೇ ಬಹಿರಂಗವಾಗಿದೆ ಎಂದು ಅವರು ಹೇಳಿದ್ದಾರೆ. ಸತ್ಯವನ್ನು ಬಹಿರಂಗಪಡಿಸಿದವರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ರಾಜಕೀಯ ಆಟವಾಡುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.
ನ್ಯಾಯಾಲಯ ವರದಿ ಕೇಳಿದ ಬೆನ್ನಲ್ಲೇ ವಿಶೇಷ ತನಿಖಾ ತಂಡದ ಮುಖ್ಯಸ್ಥರು ರಹಸ್ಯ ದಾಖಲೆಗಳೊಂದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ದೀರ್ಘ ಕಾಲ ಚರ್ಚೆ ನಡೆಸಿರುವುದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಯನ್ನು ಅಶೋಕ್ ಎತ್ತಿದ್ದಾರೆ.
ಅಶೋಕ್, ಸರ್ಕಾರದ ಮುಂದೆ ಮೂರು ಪ್ರಮುಖ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ತನಿಖಾ ಸಂಸ್ಥೆ ಗೃಹ ಸಚಿವರೊಂದಿಗೆ ತುರ್ತಾಗಿ ರಹಸ್ಯ ಸಭೆ ನಡೆಸಿರುವುದು ಯಾರನ್ನು ರಕ್ಷಿಸಲು ಅಥವಾ ಯಾರ ವಿರುದ್ಧ ಹೊಸ ಪ್ರಕರಣ ರೂಪಿಸಲು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಧರ್ಮಸ್ಥಳದ ಹೆಸರಿಗೆ ಕಳಂಕ ತರಲು 200 ಕೋಟಿ ರೂಪಾಯಿ ಹಣ ಒದಗಿಸಿದ ಎನ್ನಲಾದ ವ್ಯಕ್ತಿ ಯಾರು ಹಾಗೂ ಇದರ ಹಿಂದೆ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆಯೇ ಎಂಬುದನ್ನೂ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಆರೋಪಿಗಳ ಬ್ರೇನ್ ಮ್ಯಾಪಿಂಗ್ ಹೆಸರಿನಲ್ಲಿ ಕನ್ನಡಿಗರ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಸಂಚು ನಡೆಯುತ್ತಿದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳವು ಕೋಟ್ಯಂತರ ಭಕ್ತರ ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿದ್ದು, ಅದರ ಪಾವಿತ್ರ್ಯಕ್ಕೆ ಧಕ್ಕೆ ತರಲು ಯಾರೇ ಪ್ರಯತ್ನಿಸಿದರೂ ಕನ್ನಡಿಗರು ಸಹಿಸುವುದಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ದ್ವೇಷಕ್ಕಾಗಿ ಧಾರ್ಮಿಕ ಕ್ಷೇತ್ರಗಳನ್ನು ಬಳಸಿಕೊಳ್ಳುವ ಕಾಂಗ್ರೆಸ್ನ ಪ್ರಯತ್ನಗಳು ಕೊನೆಗೊಳ್ಳುವ ಸಮಯ ಸಮೀಪಿಸಿದೆ ಎಂದು ಅವರು ಹೇಳಿದ್ದಾರೆ.
ಧರ್ಮಸ್ಥಳದ ವಿರುದ್ಧ ಯಾವುದೇ ರೀತಿಯ ಕುತಂತ್ರ ನಡೆಸಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಗಂಭೀರ ಪರಿಣಾಮ ಉಂಟುಮಾಡಲಿದೆ ಎಂದು ಆರ್. ಅಶೋಕ್ ತಮ್ಮ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.