
ನವದೆಹಲಿ, 14 ಜೂನ್ (ಹಿ.ಸ.):
ಆ್ಯಂಕರ್:
ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಜೂನ್ 19ರಂದು ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ‘ಮೆಗಾ ಜಾಬ್ ಫೇರ್ 2026’ ಆಯೋಜಿಸಲಾಗುವುದು ಎಂದು ಭಾರತೀಯ ಯುವ ಕಾಂಗ್ರೆಸ್ ಘೋಷಿಸಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ನಿರುದ್ಯೋಗ ಸಮಸ್ಯೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ ಭಾನು ಚಿಬ್ ಹಾಗೂ ದೆಹಲಿ ಕಾಂಗ್ರೆಸ್ ಸಂಘಟನಾ ಉಸ್ತುವಾರಿ ಅನಿಲ್ ಭಾರದ್ವಾಜ್ ಅವರು ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ ಮಾಡಿದರು.
ಉದಯ ಭಾನು ಚಿಬ್ ಮಾತನಾಡಿ, ಜೂನ್ 19ರಂದು ನಡೆಯಲಿರುವ ಉದ್ಯೋಗ ಮೇಳದಲ್ಲಿ ಸುಮಾರು 150 ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿಸಿದರು. ಅಭ್ಯರ್ಥಿಗಳ ಅರ್ಹತೆಯ ಆಧಾರದ ಮೇಲೆ ಸಂದರ್ಶನ ನಡೆಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಉದ್ಯೋಗ ಮೇಳಕ್ಕೆ ಸಂಬಂಧಿಸಿದ ನೋಂದಣಿ ಮತ್ತು ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನೂ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ ವರ್ಷವೂ ಇದೇ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಮೆಗಾ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಸುಮಾರು 18 ಸಾವಿರ ಯುವಕರು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ ಸುಮಾರು 7 ಸಾವಿರ ಮಂದಿಗೆ ನೇಮಕಾತಿ ಪತ್ರ ನೀಡಲಾಗಿತ್ತು ಎಂದು ಚಿಬ್ ಹೇಳಿದರು. ಇದಕ್ಕೂ ಮೊದಲು ಜೈಪುರ ಮತ್ತು ಪಾಟ್ನಾದಲ್ಲಿಯೂ ಇದೇ ಮಾದರಿಯ ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ದೆಹಲಿ ಕಾಂಗ್ರೆಸ್ ಸಂಘಟನಾ ಉಸ್ತುವಾರಿ ಅನಿಲ್ ಭಾರದ್ವಾಜ್ ಮಾತನಾಡಿ, ಕಳೆದ ವರ್ಷದ ಉದ್ಯೋಗ ಮೇಳದ ಮೊದಲ ದಿನವೇ ಸುಮಾರು 3,500 ಯುವಕರಿಗೆ ಉದ್ಯೋಗ ದೊರೆತಿತ್ತು. ಈ ಬಾರಿ ಆ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿದರು.
ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಮೆಗಾ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸುವಂತೆ ಕಾಂಗ್ರೆಸ್ ಕರೆ ನೀಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.