ಘನತ್ಯಾಜ್ಯ ನಿರ್ವಹಣಾ ಟೆಂಡರ್ ತನಿಖೆಯಲ್ಲಿ ಪಾರದರ್ಶಕತೆಗೆ ಅಶೋಕ್ ಆಗ್ರಹ
ಬೆಂಗಳೂರು, 14 ಜೂನ್ (ಹಿ.ಸ.) : ಆ್ಯಂಕರ್ : ₹39,437 ಕೋಟಿ ಮೊತ್ತದ ಘನತ್ಯಾಜ್ಯ ನಿರ್ವಹಣಾ ಟೆಂಡರ್ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪತ್ರ ಬರೆದು, ಯಾವುದೇ ಒತ್ತಡಗಳಿಗೆ ಮಣಿಯದೆ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್
Ashok letter


ಬೆಂಗಳೂರು, 14 ಜೂನ್ (ಹಿ.ಸ.) :

ಆ್ಯಂಕರ್ : ₹39,437 ಕೋಟಿ ಮೊತ್ತದ ಘನತ್ಯಾಜ್ಯ ನಿರ್ವಹಣಾ ಟೆಂಡರ್ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪತ್ರ ಬರೆದು, ಯಾವುದೇ ಒತ್ತಡಗಳಿಗೆ ಮಣಿಯದೆ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅಶೋಕ, ಸಮಿತಿಯು ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಒತ್ತಡಗಳಿಗೆ ಒಳಗಾಗದೆ ಆತ್ಮಸಾಕ್ಷಿ ಮತ್ತು ಜನಹಿತವನ್ನು ಆಧಾರವಾಗಿಟ್ಟುಕೊಂಡು ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಕೋರಿರುವುದಾಗಿ ತಿಳಿಸಿದ್ದಾರೆ.

ಈ ವಿಚಾರವು ಕೇವಲ ಒಂದು ಟೆಂಡರ್ಗೆ ಸೀಮಿತವಾಗಿಲ್ಲ. ಇದು ಬೆಂಗಳೂರಿನ ಭವಿಷ್ಯ, ತೆರಿಗೆದಾರರ ಹಣದ ಸಮರ್ಪಕ ಬಳಕೆ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸತ್ಯ, ಪಾರದರ್ಶಕತೆ ಮತ್ತು ಜನಹಿತದ ಪರವಾಗಿ ನಿಲ್ಲುವುದು ಸಮಿತಿಯ ಜವಾಬ್ದಾರಿಯಾಗಿದ್ದು, ಯಾವುದೇ ಪ್ರಭಾವ, ಒತ್ತಡ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ವಾಸ್ತವಾಂಶಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಬೆಂಗಳೂರು ನಗರದ ಜನರ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ಅವಕಾಶ ಇಂದು ಸಮಿತಿಯ ಮುಂದಿದ್ದು, ಕರ್ನಾಟಕದ ಜನತೆ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ಸಮಿತಿಯು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಘನತ್ಯಾಜ್ಯ ನಿರ್ವಹಣಾ ಟೆಂಡರ್ಗೆ ಸಂಬಂಧಿಸಿದಂತೆ ಉದ್ಭವಿಸಿರುವ ಪ್ರಶ್ನೆಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪರಿಶೀಲನೆ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿರಬೇಕು ಎಂಬುದು ತಮ್ಮ ಆಗ್ರಹ ಎಂದು ಅಶೋಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande