
ಹುಬ್ಬಳ್ಳಿ, 14 ಜೂನ್ (ಹಿ.ಸ.):
ಆ್ಯಂಕರ್:
ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಚಬ್ಬಿ ಮಹಿಳಾ ಮಂಡಳದ ವತಿಯಿಂದ ಗ್ರಾಮದ ಶ್ರೀ ಗುರು ಸಿದ್ಧಾರೂಢ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ಸಂಪ್ರದಾಯಬದ್ಧ ಉಡಿ ತುಂಬುವ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಸದ್ಗುರು ಸಿದ್ಧಾರೂಢರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಮಹಿಳೆಯರು ರಂಗೋಲಿ ಹಾಕಿ, ದೀಪಗಳನ್ನು ಬೆಳಗಿಸಿ, ಸುಮಾರು 90ಕ್ಕೂ ಹೆಚ್ಚು ಮುತ್ತೈದೆಯರಿಗೆ ಕಂಕಣ ಕಟ್ಟಿ ಆರತಿ ಮಾಡಿ ಉಡಿ ತುಂಬುವ ಶಾಸ್ತ್ರವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸ.ಹಿ. ಪ್ರಾಥಮಿಕ ಶಾಲೆಗೆ 23 ಗುಂಟೆ ಜಾಗ ದಾನ ಮಾಡಿರುವ ದೇವೇಂದ್ರಪ್ಪ ಕಾಗೇನವರ ಅವರು ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಉಡಿ ತುಂಬುವ ಕಾರ್ಯಕ್ರಮದ ಜವಾಬ್ದಾರಿಯನ್ನು ಪ್ರಕಾಶ್ ಗೋಕುಲ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮಠದ ಅರ್ಚಕರಾದ ಸಂಗಯ್ಯ ಸ್ವಾಮಿ ಹಿರೇಮಠ, ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಗಂಗಾಧರ ದೊಡ್ಡವಾಡ, ರಾಜ್ಯಾಧ್ಯಕ್ಷೆ ಪ್ರಭಾವತಿ ಹಾದಿಮನಿ, ಹುಬ್ಬಳ್ಳಿ ತಾಲೂಕು ಅಧ್ಯಕ್ಷೆ ಸುಮಾ ಹಿರೇಮಠ ಸೇರಿದಂತೆ ಸಂಘಟನೆಯ ಸದಸ್ಯರು ಹಾಗೂ ಚಬ್ಬಿ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.
ತಾವರಗೇರಿ ತಂಡದವರು ಜಾನಪದ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿದರು. ಈ ವೇಳೆ ಮಾತನಾಡಿದ ಗಂಗಾಧರ ದೊಡ್ಡವಾಡ, ಸಮಾಜದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ದೇವತಾ ಕಾರ್ಯಗಳೆಲ್ಲವೂ ಮಾತೃಶಕ್ತಿಯ ಮೂಲಕವೇ ನೆರವೇರುತ್ತವೆ ಎಂದು ಹೇಳಿದರು.
ದೇವೇಂದ್ರಪ್ಪ ಕಾಗೇನವರ ಮಾತನಾಡಿ, “ತಾಯಿಗಿಂತ ಶ್ರೇಷ್ಠ ದೇವರು ಯಾರೂ ಇಲ್ಲ. ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿಯನ್ನು ಗೌರವದಿಂದ ನೋಡಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ತೇಜಸ್ವಿನಿ ನಡೆಸಿಕೊಟ್ಟರೆ, ವಂದನಾರ್ಪಣೆಯನ್ನು ವನ್ನೂರು ಸರ್ ನೆರವೇರಿಸಿದರು. ಕಾರ್ಯಕ್ರಮವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಂದೇಶವನ್ನು ಸಾರುವ ಮೂಲಕ ಯಶಸ್ವಿಯಾಗಿ ನಡೆಯಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.