
ಗದಗ, 14 ಜೂನ್ (ಹಿ.ಸ.)
ಆ್ಯಂಕರ್:- ಗದಗ ತಾಲೂಕನ್ನು ಹಸಿರೀಕರಣದತ್ತ ಕೊಂಡೊಯ್ಯುವ ಮಹತ್ವಾಕಾಂಕ್ಷಿ ಯೋಜನೆಯಡಿ ಸಾಮಾಜಿಕ ಅರಣ್ಯ ವಲಯವು ಮಹತ್ವದ ಹೆಜ್ಜೆ ಇಟ್ಟಿದೆ. ಬಿಂಕದಕಟ್ಟಿ ಹೈಟೆಕ್ ಸಸ್ಯ ಕ್ಷೇತ್ರದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳು ಸಿದ್ಧವಾಗಿದ್ದು, ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿತರಣೆಗೆ ಸಜ್ಜಾಗಿದೆ.
ಸಾಮಾಜಿಕ ಅರಣ್ಯ ವಲಯ ವ್ಯಾಪ್ತಿಯ ಈ ಸಸ್ಯ ಕ್ಷೇತ್ರದಲ್ಲಿ ಮಹಾಗನಿ, ಶ್ರೀಗಂಧ, ತೇಗ, ಬಿದಿರು, ರಕ್ತಚಂದನ ಸೇರಿದಂತೆ ವಿವಿಧ ವಾಣಿಜ್ಯ ಹಾಗೂ ಪರಿಸರ ಸ್ನೇಹಿ ಸಸಿಗಳನ್ನು ಬೆಳೆಯಲಾಗಿದೆ. ಧಾರವಾಡ ಅಭಿವೃದ್ಧಿ ಘಟಕದಿಂದ ತರಲಾದ ಬೀಜಗಳನ್ನು ಇಲ್ಲಿ ಬಿತ್ತನೆ ಮಾಡಿ, ಒಂದು ವರ್ಷ ಕಾಲ ಪೋಷಣೆ ನೀಡಿ ನಂತರ ಸಸಿಗಳನ್ನು ವಿತರಿಸಲಾಗುತ್ತಿದೆ.
ಉಚಿತ ಸಸಿ ವಿತರಣೆ ಯೋಜನೆ
ಸಾಮಾಜಿಕ ಅರಣ್ಯ ವಲಯದ ‘ಆರ್’ ಯೋಜನೆಯಡಿ ಹಕ್ಕುಪತ್ರ ಹೊಂದಿರುವ ರೈತರಿಗೆ ಸುಮಾರು 3,500 ಸಸಿಗಳನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕಬಲಾಯತಕಟ್ಟಿ ತಾಂಡಾ ಸೇರಿದಂತೆ ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುವ ಅರ್ಹ ರೈತರಿಗೆ ಕೇಂದ್ರ ಯೋಜನೆಯಡಿ ಈ ಸೌಲಭ್ಯ ದೊರೆಯಲಿದೆ ಎಂದು ಇಲಾಖೆ ತಿಳಿಸಿದೆ.
ವೈವಿಧ್ಯಮಯ ಸಸಿ ತಳಿ ಲಭ್ಯ
ಬಿಂಕದಕಟ್ಟಿ ಸಸ್ಯ ಕ್ಷೇತ್ರದಲ್ಲಿ ನೇರಳೆ, ಹೆಬ್ಬೇವು, ನೆಲ್ಲಿ, ಬೇವು, ಕರಿಬೇವು, ಮಾವು, ಸೀತಾಫಲ, ಅರಳಿ, ಅತ್ತಿ ಸೇರಿದಂತೆ ಅನೇಕ ಸ್ಥಳೀಯ ಸಸಿಗಳು ಲಭ್ಯವಿವೆ. ಜೊತೆಗೆ ಶ್ರೀಗಂಧ, ಕಬೂಬಿಯ, ನುಗ್ಗಿ, ಹೆಬ್ಬೇವು ಸೇರಿದಂತೆ ವಿಶೇಷ ತಳಿಗಳ ಸಸಿಗಳನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಿಂದ ಬೀಜ ಸಂಗ್ರಹಿಸಿ ಬೆಳೆಸಲಾಗುತ್ತಿದೆ.
ಸಸಿ ಗಾತ್ರಕ್ಕೆ ಅನುಗುಣವಾಗಿ ಸಣ್ಣ ಸಸಿಗೆ ರೂ.3 ಹಾಗೂ ದೊಡ್ಡ ಸಸಿಗೆ ರೂ.6 ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಇದೇ ಸಸಿಗಳ ಬೆಲೆ ರೂ.20 ರಿಂದ ರೂ.33 ವರೆಗೆ ಇರುವುದರಿಂದ ರೈತರಿಗೆ ಇದು ಹೆಚ್ಚು ಲಾಭದಾಯಕ ಯೋಜನೆಯಾಗಿದೆ.
ಅಧಿಕಾರಿಗಳ ಮನವಿ
“ರೈತರು ಹಾಗೂ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಗದಗ ತಾಲೂಕನ್ನು ಹಸಿರಾಗಿಸಲು ಕೈಜೋಡಿಸಬೇಕು. ಜನಸಹಭಾಗಿತ್ವದ ಮೂಲಕ ಹಸಿರೀಕರಣ ಅಭಿಯಾನ ಯಶಸ್ವಿಯಾಗುತ್ತದೆ,” ಎಂದು ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ನಮನ ನಾಯ್ಕ ತಿಳಿಸಿದ್ದಾರೆ.
ರಸ್ತೆ ಬದಿ ಹಸಿರೀಕರಣ ಯೋಜನೆ
ತಾಲೂಕು ವ್ಯಾಪ್ತಿಯಲ್ಲಿ ಸುಮಾರು 24 ಕಿಲೋಮೀಟರ್ ರಸ್ತೆ ಬದಿಯಲ್ಲಿ ಸಸಿ ನೆಡುವ ಯೋಜನೆ ರೂಪಿಸಲಾಗಿದ್ದು, ಇದರ ನಿರ್ವಹಣೆ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಒಂದು ವರ್ಷದವರೆಗೆ ಸಸಿಗಳ ಪೋಷಣೆ, ನೀರುಣಿಸುವ ಜವಾಬ್ದಾರಿಯನ್ನೂ ಗುತ್ತಿಗೆದಾರರು ವಹಿಸಿಕೊಳ್ಳಲಿದ್ದಾರೆ.
ಬಿಂಕದಕಟ್ಟಿ ಸಸ್ಯ ಕ್ಷೇತ್ರದ ಮೂಲಕ ರೂಪುಗೊಂಡಿರುವ ಈ ಹಸಿರೀಕರಣ ಅಭಿಯಾನವು ಗದಗ ತಾಲೂಕಿನಲ್ಲಿ ಪರಿಸರ ಸಂರಕ್ಷಣೆಗೆ ಹೊಸ ಚೈತನ್ಯ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP