ಗದುಗಿನಲ್ಲಿ ಯೂರಿಯಾ ಪೂರೈಕೆ ಸ್ಥಗಿತ ; ರೈತರ ಅಕ್ರೋಶ
ಗದಗ, 13 ಜೂನ್ (ಹಿ.ಸ.) : ಆ್ಯಂಕರ್ : ಮುಂಗಾರು ಮಳೆಯ ಆರಂಭದೊಂದಿಗೆ ಬಿತ್ತನೆ ಕಾರ್ಯದಲ್ಲಿ ತೊಡಗಬೇಕಿದ್ದ ಗದಗ ಜಿಲ್ಲೆಯ ರೈತರು ಇದೀಗ ಯೂರಿಯಾ ಗೊಬ್ಬರಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಗದಗ ನಗರದ ಡಂಬಳ ನಾಕಾ ಬಳಿಯ ಶ್ರೀ ಎಂಟರ್ಪ್ರೈಸಸ್ ಅಂಗಡಿ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ನೂರ
ಫೋಟೋ


ಗದಗ, 13 ಜೂನ್ (ಹಿ.ಸ.) :

ಆ್ಯಂಕರ್ : ಮುಂಗಾರು ಮಳೆಯ ಆರಂಭದೊಂದಿಗೆ ಬಿತ್ತನೆ ಕಾರ್ಯದಲ್ಲಿ ತೊಡಗಬೇಕಿದ್ದ ಗದಗ ಜಿಲ್ಲೆಯ ರೈತರು ಇದೀಗ ಯೂರಿಯಾ ಗೊಬ್ಬರಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಗದಗ ನಗರದ ಡಂಬಳ ನಾಕಾ ಬಳಿಯ ಶ್ರೀ ಎಂಟರ್ಪ್ರೈಸಸ್ ಅಂಗಡಿ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ನೂರಾರು ರೈತರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದರೂ, ತಾಂತ್ರಿಕ ದೋಷದ ಕಾರಣ ಗೊಬ್ಬರ ವಿತರಣೆ ಸ್ಥಗಿತಗೊಂಡಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಳಗ್ಗೆಯೇ ಅಂಗಡಿ ಮುಂಭಾಗಕ್ಕೆ ಆಗಮಿಸಿದ್ದರು. ಕೆಲವರು ತಮ್ಮ ಸರದಿಯನ್ನು ಕಾಯ್ದಿರಿಸಲು ಹೆಲ್ಮೆಟ್, ಟವೆಲ್, ನೀರಿನ ಬಾಟಲಿ ಹಾಗೂ ಇತರ ವಸ್ತುಗಳನ್ನು ಸಾಲಿನಲ್ಲಿ ಇಟ್ಟು ಪಾಳೆ ಹಚ್ಚಿದ್ದರು. ಆದರೆ ಹಲವು ಗಂಟೆಗಳ ಕಾಲ ಕಾದ ಬಳಿಕ ಯೂರಿಯಾ ವಿತರಣೆ ನಡೆಯುವುದಿಲ್ಲ ಎಂಬ ಮಾಹಿತಿ ತಿಳಿದು ರೈತರು ತೀವ್ರ ನಿರಾಸೆ ವ್ಯಕ್ತಪಡಿಸಿದರು.

ಅಂಗಡಿ ಮುಂಭಾಗದಲ್ಲಿ ಇಂದು ಯೂರಿಯಾ ವಿತರಣೆ ಇಲ್ಲ ಎಂಬ ನಾಮಫಲಕ ಅಳವಡಿಸಲಾಗಿದ್ದು, ಯೂರಿಯಾ ವಿತರಣೆಗಾಗಿ ಬಳಸುವ ಆ್ಯಪ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದೇ ವಿತರಣೆ ಸ್ಥಗಿತಕ್ಕೆ ಕಾರಣ ಎಂದು ತಿಳಿಸಲಾಗಿದೆ. ಈ ಬೆಳವಣಿಗೆ ರೈತರ ಅಸಮಾಧಾನಕ್ಕೆ ಮತ್ತಷ್ಟು ಕಾರಣವಾಯಿತು.

ರೈತರ ಪ್ರಕಾರ, ಈಗಾಗಲೇ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಲಭ್ಯತೆ ಸಮರ್ಪಕವಾಗಿಲ್ಲ. ಒಂದು ಎಕರೆಗೆ ಒಂದು ಚೀಲ ಮಾತ್ರ ವಿತರಣೆ ಮಾಡಲಾಗುತ್ತಿದ್ದು, ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ದೊರೆಯುತ್ತಿಲ್ಲ. ಇದರ ನಡುವೆ ತಾಂತ್ರಿಕ ಸಮಸ್ಯೆ ನೆಪವೊಡ್ಡಿ ವಿತರಣೆ ಸಂಪೂರ್ಣವಾಗಿ ನಿಲ್ಲಿಸಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಕೃಷಿ ಇಲಾಖೆ ಜಿಲ್ಲೆಯಲ್ಲಿ ಗೊಬ್ಬರದ ಕೊರತೆ ಇಲ್ಲ ಎಂದು ಹೇಳುತ್ತದೆ. ಆದರೆ ವಾಸ್ತವದಲ್ಲಿ ರೈತರಿಗೆ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ. ಹಣ ನೀಡಿದರೂ ಅಗತ್ಯ ಪ್ರಮಾಣದಲ್ಲಿ ಯೂರಿಯಾ ದೊರೆಯುತ್ತಿಲ್ಲ. ಬಿತ್ತನೆ ಸಮಯದಲ್ಲೇ ಇಂತಹ ಸಮಸ್ಯೆ ಎದುರಾಗಿರುವುದು ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಮಳೆಯು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಈಗಾಗಲೇ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯೂರಿಯಾ ಗೊಬ್ಬರ ಲಭ್ಯವಾಗದಿರುವುದು ಕೃಷಿ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಗೊಬ್ಬರಕ್ಕಾಗಿ ದಿನಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.

ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ವಿತರಣೆ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಸಮಸ್ಯೆ ಯಾವಾಗ ಬಗೆಹರಿಯಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಇದರಿಂದ ರೈತರು ಕೃಷಿ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಸಮರ್ಪಕ ಪೂರೈಕೆ ಖಚಿತಪಡಿಸಬೇಕು, ವಿತರಣಾ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಬೇಕು ಹಾಗೂ ರೈತರು ಅನಗತ್ಯವಾಗಿ ಪರದಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅನ್ನದಾತರು ಆಗ್ರಹಿಸಿದ್ದಾರೆ.

ಬಿತ್ತನೆ ಕಾಲದಂತಹ ಮಹತ್ವದ ಸಂದರ್ಭದಲ್ಲಿ ಯೂರಿಯಾ ವಿತರಣೆ ಸ್ಥಗಿತಗೊಂಡಿರುವುದು ರೈತರ ಕೃಷಿ ಕಾರ್ಯಗಳಿಗೆ ಅಡ್ಡಿಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಸಮಸ್ಯೆ ಬಗೆಹರಿಸಿ ಗೊಬ್ಬರ ವಿತರಣೆಯನ್ನು ಪುನರಾರಂಭಿಸಬೇಕೆಂಬುದು ರೈತ ಸಮುದಾಯದ ಒತ್ತಾಯವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande