ಗದಗ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಶಾಸಕರ ಪೈಪೋಟಿ
ಗದಗ, 13 ಜೂನ್ (ಹಿ.ಸ.) : ಆ್ಯಂಕರ್ : ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ಗದಗ ಜಿಲ್ಲೆಯ ಇಬ್ಬರು ಹಿರಿಯ ಹಾಗೂ ಪ್ರಭಾವಿ ನಾಯಕರಾದ ಮಾಜಿ ಸಚಿವ ಎಚ್.ಕೆ. ಪಾಟೀಲ್ ಮತ್ತು ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರ ಬೆಂಬಲಿಗರು ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ
ಫೋಟೋ


ಗದಗ, 13 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ಗದಗ ಜಿಲ್ಲೆಯ ಇಬ್ಬರು ಹಿರಿಯ ಹಾಗೂ ಪ್ರಭಾವಿ ನಾಯಕರಾದ ಮಾಜಿ ಸಚಿವ ಎಚ್.ಕೆ. ಪಾಟೀಲ್ ಮತ್ತು ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರ ಬೆಂಬಲಿಗರು ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಗದಗ ನಗರದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಲಾಯಿತು. ಈ ವೇಳೆ ಹಲವಾರು ಮಹಿಳಾ ಕಾರ್ಯಕರ್ತೆಯರು ಭಾವುಕರಾಗಿ ಕಣ್ಣೀರು ಹಾಕಿ ಪಕ್ಷದ ನಾಯಕತ್ವಕ್ಕೆ ಮನವಿ ಸಲ್ಲಿಸಿದರು. ಎಚ್.ಕೆ. ಪಾಟೀಲ್ ಅವರು ರಾಜ್ಯದ ಅನುಭವಿ ರಾಜಕಾರಣಿಯಾಗಿದ್ದು, ಮುಖ್ಯಮಂತ್ರಿ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ನಾಯಕರು ಎಂದು ಕಾರ್ಯಕರ್ತೆಯರು ಅಭಿಪ್ರಾಯಪಟ್ಟರು.

ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಎಚ್.ಕೆ. ಪಾಟೀಲ್ ಅವರನ್ನು ಕಡೆಗಣಿಸಿರುವುದು ಉತ್ತರ ಕರ್ನಾಟಕ ಭಾಗಕ್ಕೆ ಮಾಡಿದ ಅನ್ಯಾಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಡವರು, ರೈತರು, ಕಾರ್ಮಿಕರು ಹಾಗೂ ಸಮಾಜದ ಹಿಂದುಳಿದ ವರ್ಗಗಳ ಪರವಾಗಿ ನಿರಂತರವಾಗಿ ಹೋರಾಟ ನಡೆಸಿರುವ ಎಚ್.ಕೆ. ಪಾಟೀಲ್ ಅವರಿಗೆ ಎರಡನೇ ಹಂತದ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ಅಥವಾ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಎಚ್.ಕೆ. ಪಾಟೀಲ್ ಅವರಿಗೆ ನ್ಯಾಯ ದೊರೆಯಲೇಬೇಕು, ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡಿ ಎಂಬ ಘೋಷಣೆಗಳು ಪ್ರತಿಭಟನಾ ಸ್ಥಳದಲ್ಲಿ ಮೊಳಗಿದವು. ಇನ್ನೊಂದೆಡೆ ರೋಣ ಶಾಸಕ ಜಿ.ಎಸ್. ಪಾಟೀಲ್ ಪರವಾಗಿ ಶಿರಹಟ್ಟಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗ ಬೀದಿಗಿಳಿದಿದೆ. ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾರ್ಯಕರ್ತರು, ಜಿ.ಎಸ್. ಪಾಟೀಲ್ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅನುಭವಿ ನಾಯಕರು. 2013ರ ವಿಧಾನಸಭಾ ಚುನಾವಣೆಯಲ್ಲಿ ಗದಗ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದರು ಎಂದು ಹೇಳಿದರು.

ಪಕ್ಷ ಸಂಘಟನೆಗೆ ಅಪಾರ ಕೊಡುಗೆ ನೀಡಿರುವ ಜಿ.ಎಸ್. ಪಾಟೀಲ್ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವುದು ನ್ಯಾಯಸಮ್ಮತವಾಗಲಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದ್ದು, ಹೈಕಮಾಂಡ್ ಅವರ ಸೇವೆಯನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು.

ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಜೂನ್ 16ರಂದು ತುಮಕೂರಿನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕರ್ತರು ಘೋಷಿಸಿದರು. ಈ ಪಾದಯಾತ್ರೆಯಲ್ಲಿ ಗದಗ ಜಿಲ್ಲೆಯ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದು, ರಾಜ್ಯ ನಾಯಕತ್ವದ ಗಮನ ಸೆಳೆಯುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಒಟ್ಟಾರೆ ಗದಗ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷದ ಎರಡು ಬಲಿಷ್ಠ ಗುಂಪುಗಳು ತಮ್ಮ ತಮ್ಮ ನಾಯಕರ ಪರವಾಗಿ ಶಕ್ತಿ ಪ್ರದರ್ಶನ ನಡೆಸುತ್ತಿದ್ದು, ಎಚ್.ಕೆ. ಪಾಟೀಲ್ ಹಾಗೂ ಜಿ.ಎಸ್. ಪಾಟೀಲ್ ನಡುವಿನ ಪೈಪೋಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಸಂಪುಟ ವಿಸ್ತರಣೆಯ ವೇಳೆ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬ ಪ್ರಶ್ನೆ ಇದೀಗ ಜಿಲ್ಲೆಯ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಉತ್ತರ ಕರ್ನಾಟಕದ ಪ್ರಾತಿನಿಧ್ಯ, ಅನುಭವ, ಸಂಘಟನೆ ಹಾಗೂ ರಾಜಕೀಯ ಸಮೀಕರಣಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande