
ಗದಗ, 13 ಜೂನ್ (ಹಿ.ಸ.) :
ಆ್ಯಂಕರ್ : ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಹೆಸರು ಬೆಳೆಗೆ ಸುರುಳಿಪೂಚಿ (ಎಲೆಮುಟಗಿ), ಎಲೆಚುಕ್ಕಿ ಹಾಗೂ ಹಳದಿ ರೋಗ ಕಾಣಿಸಿಕೊಂಡಿದ್ದು, ತಾಲೂಕಿನ ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಿತ್ತನೆಯಾಗಿ ಕೇವಲ 20 ರಿಂದ 25 ದಿನಗಳಷ್ಟೇ ಆಗಿರುವ ಬೆಳೆಯಲ್ಲಿ ಆರಂಭಿಕ ಹಂತದಲ್ಲಿಯೇ ರೋಗ ಲಕ್ಷಣಗಳು ಕಂಡುಬಂದಿರುವುದು ರೈತರ ನಿರೀಕ್ಷೆಗಳಿಗೆ ಭಾರೀ ಹೊಡೆತ ನೀಡಿದಂತಾಗಿದೆ.
ಈ ಬಾರಿ ಎಲ್ನೋ ಪರಿಣಾಮದಿಂದ ಮುಂಗಾರು ಮಳೆ ಕೊರತೆಯಾಗುವ ಸಾಧ್ಯತೆ ಇದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ರೈತರು ಮೇ ತಿಂಗಳ ಮೂರನೇ ಹಾಗೂ ನಾಲ್ಕನೇ ವಾರದಲ್ಲಿಯೇ ಹೆಸರು ಬಿತ್ತನೆ ಕಾರ್ಯ ಆರಂಭಿಸಿದ್ದರು. ಕಡಿಮೆ ಮಳೆಯಲ್ಲಿಯೂ ಉತ್ತಮ ಇಳುವರಿ ನೀಡುವ ಬೆಳೆ ಎಂಬ ಕಾರಣಕ್ಕೆ ಹೆಚ್ಚಿನ ರೈತರು ಹೆಸರು ಬೆಳೆಯತ್ತ ಒಲವು ತೋರಿದ್ದರು. ಆದರೆ ಈಗ ಮಳೆಯ ಅಭಾವದ ಜೊತೆಗೆ ರೋಗಬಾಧೆಯೂ ಕಾಣಿಸಿಕೊಂಡಿರುವುದು ಅನ್ನದಾತರ ಸಂಕಷ್ಟವನ್ನು ದ್ವಿಗುಣಗೊಳಿಸಿದೆ.
ಕಳೆದ ವರ್ಷವೂ ರೋಗಬಾಧೆ ಹಾಗೂ ಹವಾಮಾನ ವೈಪರೀತ್ಯದಿಂದ ಹೆಸರು ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿತ್ತು. ಆ ಅನುಭವದಿಂದ ಪಾಠ ಕಲಿತ ರೈತರು ಈ ಬಾರಿ ಗುಣಮಟ್ಟದ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಅಣ್ಣಿಗೇರಿ, ನವಲಗುಂದ ಹಾಗೂ ನರಗುಂದ ಭಾಗಗಳಿಂದ ಪ್ರತಿ ಕೆ.ಜಿ.ಗೆ ಸುಮಾರು 160 ರೂ. ದರದಲ್ಲಿ ಬೀಜ ಖರೀದಿಸಿ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದರು. ಕೇಂದ್ರ ಸರ್ಕಾರ ಹೆಸರು ಬೆಳೆಗೆ ಬೆಂಬಲ ಬೆಲೆ ಘೋಷಿಸಿರುವುದು ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ರೈತರು ಹೆಚ್ಚಿನ ನಿರೀಕ್ಷೆ ಹೊಂದಿದ್ದರು.
ತಾಲೂಕಿನಲ್ಲಿ ಸುಮಾರು 5,100 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದ್ದು, ಲಕ್ಷೇಶ್ವರ, ಶಿಗ್ಲಿ, ದೊಡ್ಡೂರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ಡಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ, ಗೊಜನೂರ, ಯಳವತ್ತಿ, ಯತ್ನಳ್ಳಿ, ಮಾಡಳ್ಳಿ, ರಾಮಗೇರಿ ಹಾಗೂ ಬಸಾಪುರ ಸೇರಿದಂತೆ ಹಲವಾರು ಗ್ರಾಮಗಳ ಕಪ್ಪು ಮಣ್ಣಿನ ಜಮೀನುಗಳಲ್ಲಿ ವ್ಯಾಪಕವಾಗಿ ಬೆಳೆ ಬೆಳೆಯಲಾಗಿದೆ. ಇದೀಗ ಈ ಭಾಗಗಳ ಅನೇಕ ಹೊಲಗಳಲ್ಲಿ ರೋಗದ ಲಕ್ಷಣಗಳು ಕಂಡುಬರುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.
ರೋಗಬಾಧೆಯಿಂದ ಎಲೆಗಳು ಸುರುಳಿಯಾಗುವುದು, ಹಳದಿ ಬಣ್ಣಕ್ಕೆ ತಿರುಗುವುದು ಹಾಗೂ ಎಲೆಗಳ ಮೇಲೆ ಚುಕ್ಕೆಗಳು ಕಾಣಿಸಿಕೊಳ್ಳುತ್ತಿರುವುದು ಬೆಳೆಯ ಬೆಳವಣಿಗೆಗೆ ತೀವ್ರ ಹಿನ್ನಡೆ ಉಂಟುಮಾಡುತ್ತಿದೆ. ಆರಂಭಿಕ ಹಂತದಲ್ಲಿಯೇ ಈ ಸಮಸ್ಯೆ ಎದುರಾಗಿರುವುದರಿಂದ ಮುಂದಿನ ದಿನಗಳಲ್ಲಿ ಇಳುವರಿ ಕುಸಿಯುವ ಭೀತಿ ಎದುರಾಗಿದೆ.
ಕಳೆದ ವರ್ಷ ಮಳೆಯಿಂದ ಬೆಳೆ ನಷ್ಟವಾಗಿತ್ತು. ಈ ಬಾರಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಹೆಚ್ಚಿನ ಹಣ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದೇವೆ. ಆದರೆ ಬಿತ್ತನೆಯಾದ ಕೆಲವೇ ದಿನಗಳಲ್ಲಿ ರೋಗ ಕಾಣಿಸಿಕೊಂಡಿರುವುದು ರೈತರ ಆತಂಕ ಹೆಚ್ಚಿಸಿದೆ. ಕೃಷಿ ಇಲಾಖೆ ಸೂಕ್ತ ಔಷಧ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ರೈತರಾದ ಚನ್ನಪ್ಪ ಷಣ್ಮುಕಿ ಹಾಗೂ ಮಲ್ಲಪ್ಪ ಸೊರಟೂರು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸೊರಟೂರು ಗ್ರಾಮದ ರೈತ ಮಹಾಂತೇಶ ಸೊರಟೂರು ಅವರ ಜಮೀನಿಗೆ ಭೇಟಿ ನೀಡಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಅವರು ರೋಗಬಾಧಿತ ಬೆಳೆಯನ್ನು ಪರಿಶೀಲಿಸಿದರು. ಮುಂಗಾರು ಪೂರ್ವ ಮಳೆಯ ಹಿನ್ನೆಲೆಯಲ್ಲಿ ಅನೇಕ ರೈತರು ಅವಧಿಗೂ ಮುನ್ನ ಬಿತ್ತನೆ ಮಾಡಿದ್ದು, ಇಂತಹ ಬೆಳೆಗಳಲ್ಲಿ ಕೀಟ ಹಾಗೂ ರೋಗಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದರು.
ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ಸೂಕ್ತ ಕ್ರಿಮಿನಾಶಕ ಸಿಂಪಡಣೆ ಕೈಗೊಳ್ಳಬೇಕು. 15 ಲೀಟರ್ ನೀರಿಗೆ 15 ಎಂಎಲ್ ಅಫಿಡೋಪೈರೋಪೆನ್ ಅಥವಾ 6 ಎಂಎಲ್ ಥಯಾಮೆಥೋಕ್ಸಾಮ್, ಅಥವಾ 10 ಗ್ರಾಂ ಡಯಾಫೆಂಥಿಯೂರಾನ್, ಅಥವಾ 5 ಎಂಎಲ್ ಇಮಿಡಾಕ್ಲೋಪ್ರಿಡ್ ಜೊತೆಗೆ 6 ಗ್ರಾಂ ಅಸಿಟಮಾಪ್ರಿಡ್ ಬೆರೆಸಿ ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಣ ಸಾಧ್ಯ ಎಂದು ರೈತರಿಗೆ ಸಲಹೆ ನೀಡಿದರು.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಈ ವಾರ ಮಳೆಯ ಸಾಧ್ಯತೆ ಕಡಿಮೆ ಇರುವುದರಿಂದ ತೇವಾಂಶ ಕೊರತೆಯಿರುವ ಪ್ರದೇಶಗಳಲ್ಲಿ ಬಿತ್ತನೆ ಮುಂದೂಡುವುದು ಉತ್ತಮ ಎಂದು ಕೃಷಿ ಇಲಾಖೆ ತಿಳಿಸಿದೆ. ಅಲ್ಲದೇ ರೈತರು ಬೆಳೆದರ್ಶಕ ಆ್ಯಪ್ನಲ್ಲಿ ಬೆಳೆ ನೋಂದಣಿ ಮಾಡಿಸಿಕೊಳ್ಳುವುದರಿಂದ ಬೆಳೆ ವಿಮೆ, ಬೆಳೆಹಾನಿ ಪರಿಹಾರ ಹಾಗೂ ಬೆಂಬಲ ಬೆಲೆ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರಿಶೀಲನಾ ಸಂದರ್ಭದಲ್ಲಿ ರೈತರಾದ ಚನ್ನಪ್ಪ ಷಣ್ಮುಕಿ, ದ್ಯಾಮಣ್ಣ ಮೋದಿ, ಮಲ್ಲಪ್ಪ ಕಲ್ಲೂರ, ಮಲ್ಲಪ್ಪ ಸೊರಟೂರು, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಪಿ.ಕೆ. ಹೊನ್ನಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆ, ಉತ್ತಮ ಇಳುವರಿ ಹಾಗೂ ಲಾಭದ ನಿರೀಕ್ಷೆಯಲ್ಲಿ ಹೆಸರು ಬೆಳೆದಿದ್ದ ಲಕ್ಷೇಶ್ವರ ತಾಲೂಕಿನ ರೈತರಿಗೆ ಆರಂಭಿಕ ಹಂತದಲ್ಲಿಯೇ ರೋಗಬಾಧೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಹಾಗೂ ಕೃಷಿ ಇಲಾಖೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಂಡು ರೈತರಿಗೆ ನೆರವಾಗಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP