
ಬಾಗಲಕೋಟೆ, 13 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ನಗರದ ನವನಗರ ಬಸ್ ನಿಲ್ದಾಣ ಆವರಣದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ಬಸ್ ನಿಲ್ದಾಣದ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ ₹105 ಲಕ್ಷ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಶಾಸಕ ಉಮೇಶ್ ಮೇಟಿ ಚಾಲನೆ ನೀಡಿದರು.
ಬಾಗಲಕೋಟೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಭಾಗವಾಗಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯಿಂದ ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ವಾಹನಗಳ ಸಂಚಾರ ಸುಗಮವಾಗುವುದರ ಜೊತೆಗೆ, ಮಳೆಗಾಲದಲ್ಲಿ ಉಂಟಾಗುವ ಕೆಸರು, ಧೂಳು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.
ಬಸ್ ನಿಲ್ದಾಣದ ಆವರಣವನ್ನು ಸ್ವಚ್ಛ, ಸುಸಜ್ಜಿತ ಹಾಗೂ ಸುರಕ್ಷಿತವಾಗಿಸುವ ಉದ್ದೇಶದಿಂದ ಈ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಅವರು, “ಬಾಗಲಕೋಟೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಜನರ ಅಗತ್ಯಗಳಿಗೆ ಸ್ಪಂದಿಸುವ ಮೂಲಸೌಕರ್ಯ ಕಾಮಗಾರಿಗಳಿಗೆ ನಿರಂತರ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ” ಎಂದು ಹೇಳಿದರು.
ನವನಗರ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಗರದ ಮೂಲಸೌಕರ್ಯ ಬಲಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande