ಕಾಲ ಬದಲಾದರೂ ಬದಲಾಗದ ವ್ಯವಸ್ಥೆ ; ಬಾಗಲಕೋಟೆಯಲ್ಲಿ ಆಡಳಿತದ ವಿರುದ್ಧ ಸಂತ್ರಸ್ತರ ಆಕ್ರೋಶ
ಬಾಗಲಕೋಟೆ, 13 ಜೂನ್ (ಹಿ.ಸ.) : ಆಂಕರ್: ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಶಾಸಕರು ಬಂದಿದ್ದಾರೆ, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರ ಬಂದಿದೆ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೂ ಹೊಸ ಸಭಾಪತಿಗಳು ನೇಮಕಗೊಂಡಿದ್ದಾರೆ. ಜಿಲ್ಲೆಗೆ ಹೊಸ ಉಸ್ತುವಾರಿ ಸಚಿವರ ಆಗಮನ ಮಾತ
ಗಲಾಟೆ


ಬಾಗಲಕೋಟೆ, 13 ಜೂನ್ (ಹಿ.ಸ.) :

ಆಂಕರ್: ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಶಾಸಕರು ಬಂದಿದ್ದಾರೆ, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರ ಬಂದಿದೆ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೂ ಹೊಸ ಸಭಾಪತಿಗಳು ನೇಮಕಗೊಂಡಿದ್ದಾರೆ. ಜಿಲ್ಲೆಗೆ ಹೊಸ ಉಸ್ತುವಾರಿ ಸಚಿವರ ಆಗಮನ ಮಾತ್ರ ಬಾಕಿ ಉಳಿದಿದೆ. ಆದರೆ ಇಷ್ಟೆಲ್ಲ ಬದಲಾವಣೆಗಳಾದರೂ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಮಾತ್ರ ನಿರೀಕ್ಷಿತ ಬದಲಾವಣೆ ಕಾಣುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿ ಹೆಚ್ಚುತ್ತಿದೆ.

ಅಧಿಕಾರಿಗಳ ಕಾರ್ಯವೈಖರಿ, ಕಡತಗಳ ವಿಳಂಬ, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದನೆ ಕೊರತೆ ಸೇರಿದಂತೆ ಹಲವು ವಿಚಾರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಇದರ ಪರಿಣಾಮವಾಗಿ ಜನರ ಸಹನೆಯ ಕಟ್ಟೆ ಒಡೆಯುವಂತಹ ಘಟನೆಗಳು ನಡೆಯುತ್ತಿವೆ.

ಸಹನೆಯ ಕಟ್ಟೆ ಒಡೆದ ಘಟನೆ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಕಚೇರಿಯಲ್ಲಿ ಶನಿವಾರ ನಡೆದ ಅಹಿತಕರ ಘಟನೆಯೊಂದು ಆಡಳಿತ ವ್ಯವಸ್ಥೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮನೆ, ಜಮೀನು ಕಳೆದುಕೊಂಡ ಸಂತ್ರಸ್ತರೊಬ್ಬರು ಪರಿಹಾರಕ್ಕಾಗಿ ಕಚೇರಿಗೆ ಹಲವು ಬಾರಿ ಅಲೆದರೂ ಕೆಲಸ ಆಗದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ.

ಆಕ್ರೋಶದ ಭರದಲ್ಲಿ ಬಿಟಿಡಿಎ ಅಧಿಕಾರಿಯೊಬ್ಬರಿಗೆ ಸಾರ್ವಜನಿಕರ ಎದುರೇ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. ಈ ಘಟನೆ ಕೇವಲ ಒಬ್ಬ ವ್ಯಕ್ತಿಯ ಆಕ್ರೋಶವಲ್ಲ, ವರ್ಷಗಳಿಂದ ಸಮಸ್ಯೆಗಳನ್ನು ಹೊತ್ತುಕೊಂಡು ಓಡಾಡುತ್ತಿರುವ ಸಂತ್ರಸ್ತರ ನೋವಿನ ಪ್ರತಿಬಿಂಬವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಏಕವ್ಯಕ್ತಿ ಪ್ರಾಬಲ್ಯದ ಆರೋಪ

ಬಾಗಲಕೋಟೆ ಜಿಲ್ಲೆಯ ಆಡಳಿತ ವ್ಯವಸ್ಥೆ ಹಿಂದಿನ ಅವಧಿಯಲ್ಲಿ ಕೆಲವೇ ವ್ಯಕ್ತಿಗಳ ಪ್ರಭಾವಕ್ಕೆ ಒಳಪಟ್ಟಿತ್ತು ಎಂಬ ಆರೋಪಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಹಿಂದಿನ ಶಾಸಕರು, ಬಿಟಿಡಿಎ ಸಭಾಪತಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಅವಧಿಗಳಲ್ಲಿಯೂ ಒಂದು ನಿರ್ದಿಷ್ಟ ಶಕ್ತಿಯ ಪ್ರಭಾವ ಆಡಳಿತದ ಮೇಲೆ ಇತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.

ಈಗ ನಾಯಕತ್ವ ಬದಲಾದರೂ ಆಡಳಿತದಲ್ಲಿ ಆ ಪ್ರಭಾವ ಕಡಿಮೆಯಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಬಿಟಿಡಿಎ ಕಚೇರಿಯಲ್ಲಿ ನಡೆದ ಘಟನೆ ಇದಕ್ಕೆ ಮತ್ತೊಂದು ಉದಾಹರಣೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.

ಕಾಣದ ಶಕ್ತಿಯ ವಿರುದ್ಧ ಜನರ ಅಸಮಾಧಾನ ಸಾಮಾಜಿಕ ಜಾಲತಾಣಗಳಲ್ಲಿಯೂ ಆಡಳಿತದಲ್ಲಿ ನಡೆಯುತ್ತಿರುವ ಹಸ್ತಕ್ಷೇಪದ ಬಗ್ಗೆ ಅಸಮಾಧಾನದ ಧ್ವನಿಗಳು ಕೇಳಿಬರುತ್ತಿವೆ. ಬಾಗಲಕೋಟೆ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಕುರಿತು ಹಲವು ಚರ್ಚೆಗಳು ನಡೆಯುತ್ತಿದ್ದು, ನೂತನ ಶಾಸಕ ಉಮೇಶ ಮೇಟಿ ಅವರ ಕುಟುಂಬದವರ ಹೆಸರಿನ ಸಾಮಾಜಿಕ ಜಾಲತಾಣ ಖಾತೆಗಳಿಂದಲೂ ಆಡಳಿತದ ಕುರಿತು ಅಭಿಪ್ರಾಯಗಳು ವೈರಲ್ ಆಗುತ್ತಿರುವುದು ಗಮನ ಸೆಳೆದಿದೆ.

ಆದರೆ ಈ ಅಸಮಾಧಾನಗಳ ನಡುವೆಯೂ ನಿರೀಕ್ಷಿತ ಮಟ್ಟದ ಬದಲಾವಣೆಗಳು ಆಗಿಲ್ಲ ಎಂಬುದು ಸಾರ್ವಜನಿಕರ ಅಳಲು.

ಆಡಳಿತಕ್ಕೆ ಕಡಿವಾಣ ಅಗತ್ಯ

ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕಾಗಿದೆ. ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಬದಲಾವಣೆ, ಸಂತ್ರಸ್ತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಹಾಗೂ ಜನಸಾಮಾನ್ಯರ ಕೆಲಸಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ.

ನೂತನ ಶಾಸಕರು ಕ್ಷೇತ್ರದ ಜನರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಆಡಳಿತದ ಮೇಲೆ ಹಿಡಿತ ಸಾಧಿಸಬೇಕು. ಇಲ್ಲವಾದಲ್ಲಿ ಜನರಲ್ಲಿ ಮಡುಗಟ್ಟಿರುವ ಅಸಮಾಧಾನ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯ ಮಾತುಗಳು ಕೇಳಿಬರುತ್ತಿವೆ.

ಅಭಿವೃದ್ಧಿಯತ್ತ ಗಮನ ಹರಿಸಬೇಕಾದ ಸಮಯ

ಬಾಗಲಕೋಟೆ ಕ್ಷೇತ್ರದ ಅಭಿವೃದ್ಧಿ, ಮುಳುಗಡೆ ಸಂತ್ರಸ್ತರ ಪುನರ್ವಸತಿ ಸಮಸ್ಯೆಗಳ ಪರಿಹಾರ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವುದು ಈಗಿನ ಜನಪ್ರತಿನಿಧಿಗಳ ಮುಂದಿರುವ ಪ್ರಮುಖ ಸವಾಲಾಗಿದೆ.

ಜನರ ವಿಶ್ವಾಸವನ್ನು ಮರಳಿ ಪಡೆಯಲು ಹೊಸ ಆಡಳಿತವು ಜನಪರ ನಿರ್ಧಾರಗಳನ್ನು ಕೈಗೊಂಡು, ಅಧಿಕಾರ ವ್ಯವಸ್ಥೆಯಲ್ಲಿ ಜವಾಬ್ದಾರಿ ಮತ್ತು ಪಾರದರ್ಶಕತೆ ತರಬೇಕಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande