
ಬೆಂಗಳೂರು, 13 ಜೂನ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಒಗಳು) ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ರಾಜ್ಯದ ವಿವಿಧ ಆಡಳಿತಾತ್ಮಕ, ಅಭಿವೃದ್ಧಿ ಹಾಗೂ ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಗ್ರ ಸಮಾಲೋಚನೆ ನಡೆಸಲಾಯಿತು. ಜಿಲ್ಲಾವಾರು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ, ಸಾರ್ವಜನಿಕ ಸೇವೆಗಳ ಪರಿಣಾಮಕಾರಿ ವಿತರಣೆ, ಜನಸಾಮಾನ್ಯರ ಸಮಸ್ಯೆಗಳ ತ್ವರಿತ ಪರಿಹಾರ, ಮಳೆಗಾಲದ ಸನ್ನದ್ಧತೆ ಹಾಗೂ ಸರ್ಕಾರದ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು.
ಈ ವೇಳೆ ಮುಖ್ಯಮಂತ್ರಿ ಅವರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳ ನಡುವೆ ಸಮನ್ವಯತೆ ಕಾಪಾಡಿಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಜನಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಬೇಕು, ಸಾರ್ವಜನಿಕರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಹಾಗೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹಾಗೂ ಮಳೆಗಾಲದ ಸಂದರ್ಭದಲ್ಲಿ ಸಂಭವಿಸಬಹುದಾದ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು. ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕಾಗಿ ಅಧಿಕಾರಿಗಳು ತಂಡದ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.