
ಬಾಗಲಕೋಟೆ, 12 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ನಗರದಲ್ಲಿ ಸಂಚಾರ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಾಗಲಕೋಟೆ ಸಂಚಾರ ಪೊಲೀಸ್ ಠಾಣೆ ವತಿಯಿಂದ ವಿಶೇಷ ವಾಹನ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು.
ನಗರದ ವಿವಿಧ ಭಾಗಗಳಲ್ಲಿ ಕೈಗೊಂಡ ಈ ಕಾರ್ಯಾಚರಣೆಯಲ್ಲಿ ವಾಹನಗಳ ದಾಖಲೆಗಳು, ನೋಂದಣಿ ಸಂಖ್ಯೆ ಫಲಕಗಳ ಅಳವಡಿಕೆ ಹಾಗೂ ಸಂಚಾರ ನಿಯಮಗಳ ಪಾಲನೆ ಕುರಿತು ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಸಂಖ್ಯೆ ಫಲಕ (ನಂಬರ್ ಪ್ಲೇಟ್) ಅಳವಡಿಸದೇ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಹಾಗೂ ವಿವಿಧ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ 20ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಯಾವುದೇ ಕಾರಣಕ್ಕೂ ಸಡಿಲಿಕೆ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನಗಳ ಮೇಲೆ ಸರಿಯಾದ ನೋಂದಣಿ ಸಂಖ್ಯೆ ಫಲಕ ಅಳವಡಿಸುವುದು ಕಡ್ಡಾಯವಾಗಿದ್ದು, ಇದು ಅಪಘಾತ, ಅಪರಾಧ ಪ್ರಕರಣಗಳು ಸೇರಿದಂತೆ ಹಲವು ಸಂದರ್ಭಗಳಲ್ಲಿ ವಾಹನಗಳ ಗುರುತಿಗೆ ಸಹಕಾರಿಯಾಗುತ್ತದೆ. ಆದ್ದರಿಂದ ಸಾರ್ವಜನಿಕರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ ನಿಯಮಾನುಸಾರ ಸಂಖ್ಯೆ ಫಲಕ ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಪಾಲಿಸುವಂತೆ ಬಾಗಲಕೋಟೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ರಸ್ತೆ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ನಗರದಲ್ಲಿ ಇಂತಹ ವಿಶೇಷ ವಾಹನ ತಪಾಸಣಾ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande