
ನವದೆಹಲಿ, 12 ಜೂನ್ (ಹಿ.ಸ.) :
ಆ್ಯಂಕರ್ : ಭಾರತದ ಖ್ಯಾತ ಶೂಟರ್ ಹಾಗೂ ತರಬೇತುದಾರ ಜಸ್ಪಾಲ್ ರಾಣಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಜಸ್ಪಾಲ್ ರಾಣಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಅಗಲಿಕೆಯು ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ” ಎಂದು ತಿಳಿಸಿದ್ದಾರೆ.
ಜಸ್ಪಾಲ್ ರಾಣಾ ಅವರು ಶೂಟಿಂಗ್ ಕ್ರೀಡೆಯಲ್ಲಿ ತಮ್ಮ ಅಸಾಧಾರಣ ಸಾಧನೆಗಳ ಮೂಲಕ ದೇಶಕ್ಕೆ ಅಪಾರ ಕೀರ್ತಿ ತಂದಿದ್ದು, ಯುವ ಕ್ರೀಡಾಪಟುಗಳನ್ನು ರೂಪಿಸುವ ಹಾಗೂ ಅವರಿಗೆ ಮಾರ್ಗದರ್ಶನ ನೀಡುವ ತರಬೇತುದಾರರಾಗಿ ಮಹತ್ವದ ಕೊಡುಗೆ ನೀಡಿದ್ದರು ಎಂದು ಪ್ರಧಾನಿ ಸ್ಮರಿಸಿದ್ದಾರೆ.
“ಶ್ರೇಷ್ಠತೆ, ಶಿಸ್ತು ಮತ್ತು ಕ್ರೀಡಾ ಕ್ಷೇತ್ರದ ಮೇಲಿನ ಅವರ ಅಚಲ ಬದ್ಧತೆ ಅವರಿಗೆ ಅಪಾರ ಗೌರವ ಮತ್ತು ಮೆಚ್ಚುಗೆಯನ್ನು ತಂದುಕೊಟ್ಟಿತ್ತು. ಅವರ ಜೀವನ ಮತ್ತು ಸಾಧನೆಗಳು ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಸದಾ ಪ್ರೇರಣೆಯಾಗಿರುತ್ತವೆ” ಎಂದು ಮೋದಿ ಹೇಳಿದ್ದಾರೆ.
ಈ ದುಃಖದ ಸಂದರ್ಭದಲ್ಲಿ ಜಸ್ಪಾಲ್ ರಾಣಾ ಅವರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಕ್ರೀಡಾ ಬಂಧುಗಳೊಂದಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿರುವ ಪ್ರಧಾನಿ, “ಓಂ ಶಾಂತಿ” ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.