
ಬಾಗಲಕೋಟೆ, 12 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ತಾಲೂಕಿನ
ಸಂಗೊಂದಿ ಗ್ರಾಮದ ಜನರ ಬಹುಕಾಲದ ಬೇಡಿಕೆಯಾಗಿದ್ದ ಬಸ್ ಸೌಲಭ್ಯ ಇದೀಗ ನನಸಾಗಿದ್ದು, ಗ್ರಾಮಸ್ಥರ ಸಂಚಾರ ಸಮಸ್ಯೆಗೆ ಪರಿಹಾರ ದೊರೆತಿದೆ ಎಂದು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಮೇಟಿ ತಿಳಿಸಿದ್ದಾರೆ.
ಸಂಗೊಂದಿ ಗ್ರಾಮಕ್ಕೆ ಹೊಸದಾಗಿ ಆರಂಭಗೊಂಡಿರುವ ಬಸ್ ಸೇವೆಯ ಕುರಿತು ಸಂತಸ ವ್ಯಕ್ತಪಡಿಸಿರುವ ಶಾಸಕರು, ಈ ಸಾರಿಗೆ ಸೌಲಭ್ಯದಿಂದ ವಿದ್ಯಾರ್ಥಿಗಳು, ರೈತರು, ಮಹಿಳೆಯರು ಸೇರಿದಂತೆ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಜನರ ದೈನಂದಿನ ಸಂಚಾರಕ್ಕೆ ಸಾರ್ವಜನಿಕ ಸಾರಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣ, ಉದ್ಯೋಗ, ಕೃಷಿ ಚಟುವಟಿಕೆಗಳು ಹಾಗೂ ತುರ್ತು ಅಗತ್ಯಗಳಿಗಾಗಿ ಪಟ್ಟಣ ಪ್ರದೇಶಗಳಿಗೆ ತೆರಳುವ ಜನರಿಗೆ ಬಸ್ ಸೇವೆ ನೆರವಾಗಲಿದೆ. ಹಲವು ವರ್ಷಗಳಿಂದ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದ ಈ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗಿರುವುದು ಸಂತಸದ ಸಂಗತಿ ಎಂದು ಶಾಸಕರು ಅಭಿಪ್ರಾಯಪಟ್ಟರು.
“ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ. ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು” ಎಂದು ಉಮೇಶ್ ಮೇಟಿ ಹೇಳಿದರು.
ಈ ಸಂದರ್ಭದಲ್ಲಿ ತಮ್ಮ ಮೇಲೆ ವಿಶ್ವಾಸವಿಟ್ಟು ಅಭಿನಂದನೆ ಸಲ್ಲಿಸಿದ ಸಂಗೊಂದಿ ಗ್ರಾಮದ ಹಿರಿಯರು, ಯುವಕರು ಹಾಗೂ ಸಮಸ್ತ ಗ್ರಾಮಸ್ಥರಿಗೆ ಶಾಸಕರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಹೊಸ ಬಸ್ ಸೇವೆ
ಆರಂಭವಾಗಿರುವುದರಿಂದ ಗ್ರಾಮಸ್ಥರಲ್ಲಿ ಹರ್ಷ ವ್ಯಕ್ತವಾಗಿದ್ದು, ಬಹುಕಾಲದ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಜನರು ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande